
ರಂಗೀನ್ ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ನೇತೃತ್ವದ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಮೊಯಿಸೆಸ್ ಹೆನ್ರಿಕ್ಸ್ ನಾಯಕತ್ವದ ಸಿಡ್ನಿ ಸಿಕ್ಸರ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಮ್ಯಾಕ್ಸ್ವೆಲ್ ಬೌಲಿಂಗ್ ಆಯ್ದುಕೊಂಡರು.

ಆದರೆ ಮೆಲ್ಬೋರ್ನ್ ಸ್ಟಾರ್ ತಂಡದ ನಾಯಕನ ನಿರ್ಧಾರ ತಪ್ಪು ಎನ್ನುವಂತೆ ಎದುರಾಳಿ ತಂಡ ಸಿಡ್ನಿ ಸಿಕ್ಸರ್ ಅಬ್ಬರಿಸಿದರು. ಆರಂಭಿಕ ಜೋಶ್ ಫಿಲಿಪೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ವಿನ್ಸ್ ಜೊತೆಗೂಡಿ ಮೊದಲ ವಿಕೆಟ್ಗೆ 90 ರನ್ಗಳ ಜೊತೆಯಾಟವಾಡಿದರು.

ಆ ಬಳಿಕ ಬಂದ ಹೆನ್ರಿಕ್ಸ್ ಕೂಡ ಅಬ್ಬರಿಸಿದರು. ಅದರಂತೆ ಜೋಶ್ ಫಿಲಿಪೆ ಹಾಗೂ ಹೆನ್ರಿಕ್ಸ್ 2ನೇ ವಿಕೆಟ್ಗೆ 102 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಸಿಡ್ನಿ ಸಿಕ್ಸರ್ ಪರ 47 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಬೌಂಡರಿಯೊಂದಿಗೆ ಜೋಶ್ ಫಿಲಿಪೆ 83 ರನ್ಗಳಿಸಿದರೆ, ಹೆನ್ರಿಕ್ಸ್ 38 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಬೌಂಡರಿಗಳೊಂದಿಗೆ 76 ರನ್ ಬಾರಿಸಿದರು. ಪರಿಣಾಮ 20 ಓವರ್ನಲ್ಲಿ ಸಿಡ್ನಿ ಸಿಕ್ಸರ್ ಕಲೆಹಾಕಿದ್ದು ಬರೋಬ್ಬರಿ 213 ರನ್ಗಳು.

214 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ವೇಗಿ ಸ್ಟೀವ್ ಓಕೆಫೆ ಆರಂಭಿಕ ಆಘಾತ ನೀಡಿದರು. ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಉರುಳಿಸಿದ ಓಕೆಫೆ ಮೊದಲ 3 ಓವರ್ನಲ್ಲೇ ಮೆಲ್ಬೋರ್ನ್ ತಂಡವನ್ನು ಕಟ್ಟಿಹಾಕಿದರು. ಆ ಬಳಿಕ ಸಿಯಾನ್ ಅಬಾಟ್ ಕೂಡ 3 ವಿಕೆಟ್ ಉರುಳಿಸಿದರು. ಅತ್ತ ಪವರ್ ಪ್ಲೇ ಮುಕ್ತಾಯದ ವೇಳೆಗೆ ಗ್ಲೆನ್ ಮ್ಯಾಕ್ಸ್ವೆಲ್ (4) ಸೇರಿದಂತೆ ಮೆಲ್ಬೋರ್ನ್ ಸ್ಟಾರ್ಸ್ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.

ಅದರಂತೆ ಸಿಡ್ನಿ ಸಿಕ್ಸರ್ಸ್ ವೇಗಿಗಳ ದಾಳಿಗೆ ತತ್ತರಿಸಿದ ಮೆಲ್ಬೋರ್ನ್ ಸ್ಟಾರ್ಸ್ 11.1 ಓವರ್ನಲ್ಲಿ 61 ರನ್ಗೆ ಸರ್ವಪತನ ಕಂಡಿತು. ಇದರೊಂದಿಗೆ ಮೊದಲ ಪಂದ್ಯದಲ್ಲೇ ಸಿಡ್ನಿ ಸಿಕ್ಸರ್ 152 ರನ್ಗಳ ಬೃಹತ್ ಅಂತರದ ಭರ್ಜರಿ ಜಯ ಸಾಧಿಸಿದೆ. ಇತ್ತ ಉದ್ಘಾಟನಾ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಅಪಕೀರ್ತಿ ಮೆಲ್ಬೊರ್ನ್ ಸ್ಟಾರ್ಸ್ ಪಾಲಾಯಿತು.