Updated on:Mar 12, 2023 | 12:36 PM
ಶನಿವಾರ ತನ್ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ತಂಡವನ್ನು ಎದುರಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿದೆ. ಇಲ್ಲಿಯವರೆಗೆ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ದಿ ಶೇರ್ ತಂಡ ಮೊದಲ 10 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 80 ರನ್ ಕಲೆಹಾಕಿತು. ಪಂಜಾಬ್ ಪರ ದೇವ್ ಖರೋಡ್ 14 ಎಸೆತಗಳಲ್ಲಿ 20 ರನ್ ಗಳಿಸಿದರೆ, ನಿಂಜಾ ಬಿ 19 ಎಸೆತಗಳಲ್ಲಿ 19 ರನ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭಿಕರಾದ ಡಾರ್ಲಿಂಗ್ ಕೃಷ್ಣ ಮತ್ತು ನಾಯಕ ಪ್ರದೀಪ್ ಬೋಗಾದಿ ಅವರ ಸ್ಫೋಟಕ ಆರಂಭದಿಂದಾಗಿ ಸುಲಭವಾಗಿ ಗುರಿ ಬೆನ್ನಟ್ಟಿತು. ಈ ಇಬ್ಬರು ವಿಕೆಟ್ ನಷ್ಟವಿಲ್ಲದೆ 69 ರನ್ ಕಲೆ ಹಾಕಿದರು.
ಆ ಬಳಿಕ ನಾಯಕನ ಆಟವಾಡಿದ ಪ್ರದೀಪ್ ಸತತ ಎರಡನೇ ಅರ್ಧಶತಕ ಬಾರಿಸುವುದರೊಂದಿಗೆ ತಂಡವನ್ನು 100 ರ ಗಡಿ ದಾಟಿಸಿದರು. ಆ ಬಳಿಕ ಬಂದ ರಾಜೀವ್ ಕೇವಲ 9 ಎಸೆತಗಳಲ್ಲಿ ಬರೋಬ್ಬರಿ 33 ರನ್‌ಗಳ ಇನ್ನಿಂಗ್ಸ್‌ನ ಆಡಿದರು. ಹೀಗಾಗಿ ಅಂತಿಮ 10 ಓವರ್‌ಗಳ ಅಂತ್ಯಕ್ಕೆ ತಂಡ 2 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು.
60 ರನ್‌ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ ಅಂತಿಮವಾಗಿ 100 ರನ್ ಗಳಿಸಿತು. ಈ ಮೂಲಕ ಕರ್ನಾಟಕ ತಂಡಕ್ಕೆ 40 ರನ್‌ಗಳ ಗುರಿ ನೀಡಿತು.
ಈ ಸಾಧಾರಣ ಗುರಿ ಬೆನ್ನಟ್ಟಿದ ಬುಲ್ಡೋಜರ್ಸ್ ತಂಡ ಮೂರನೇ ಓವರ್ನಲ್ಲಿಯೇ ಗೆಲುವಿನ ನಗೆ ಬೀರಿತು. ತಂಡದ ಪರ ಮತ್ತೆ ಅಬ್ಬರಿಸಿದ ರಾಜೀವ್ ಕೇವಲ 8 ಎಸೆತಗಳಲ್ಲಿ 28 ರನ್ ಗಳಿಸಿದರು.
ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಬುಲ್ಡೋಜರ್ಸ್ ತಂಡ ಲೀಗ್ನಲ್ಲಿ ಸೆಮಿ-ಫೈನಲಿಗೆ ಎಂಟ್ರಿಕೊಟ್ಟಿದೆ.
Published On - 12:33 pm, Sun, 12 March 23