ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 49.4 ಓವರ್ಗಳಲ್ಲಿ 241 ರನ್ ಕಲೆಹಾಕಿದರೆ, ಭಾರತ ತಂಡವು ಈ ಗುರಿಯನ್ನು ಕೇವಲ 42.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಭಾರತ ತಂಡವು ಸೆಮಿಫೈನಲ್ಗೇರುವುದು ಖಚಿತವಾಗಿದೆ. ಆದರೆ ಟೀಮ್ ಇಂಡಿಯಾ ವಿರುದ್ಧ ಸೋತಿರುವ ಪಾಕಿಸ್ತಾನ್ ತಂಡದ ಭವಿಷ್ಯ ನ್ಯೂಝಿಲೆಂಡ್-ಬಾಂಗ್ಲಾದೇಶ್ ತಂಡಗಳ ಕೈಯಲ್ಲಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಮ್ಯಾಚ್ನಲ್ಲಿ ಬಾಂಗ್ಲಾದೇಶ್ ತಂಡ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡದ ಸೆಮಿಫೈನಲ್ ಕನಸು ಜೀವಂತವಿರಲಿದೆ.
ಇಲ್ಲಿ ನ್ಯೂಝಿಲೆಂಡ್ ವಿರುದ್ಧ ಬಾಂಗ್ಲಾದೇಶ್ ಹಾಗೂ ಭಾರತ ತಂಡಗಳು ಗೆಲ್ಲಬೇಕು. ಹಾಗೆಯೇ ಪಾಕಿಸ್ತಾನ್ ತಂಡ ಬಾಂಗ್ಲಾದೇಶ್ ವಿರುದ್ಧ ಭರ್ಜರಿ ಜಯ ಸಾಧಿಸಬೇಕು. ಹೀಗಾದಲ್ಲಿ ಪಾಕಿಸ್ತಾನ್ ತಂಡವು ಉತ್ತಮ ನೆಟ್ ರನ್ ರೇಟ್ ಪಡೆದು ಗ್ರೂಪ್-ಎ ನಿಂದ 2ನೇ ತಂಡವಾಗಿ ಸೆಮಿಫೈನಲ್ಗೇರಬಹುದು.
ಇಂತಹದೊಂದು ಪವಾಡ ಸಂಭವಿಸಿದರೆ, ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮತ್ತೆ ಮುಖಾಮುಖಿ ಕೂಡ ಆಗಬಹುದು. ಅಂದರೆ ಗ್ರೂಪ್-ಎ ನಿಂದ ಭಾರತ ಮತ್ತು ಪಾಕಿಸ್ತಾನ್ ಸೆಮಿಫೈನಲ್ಗೇರಿದರೆ, ಉಭಯ ತಂಡಗಳು ಗ್ರೂಪ್-ಬಿ ನಲ್ಲಿರುವ ತಂಡಗಳ ವಿರುದ್ಧ ಸೆಣಸಲಿದೆ.
ಈ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಜಯ ಸಾಧಿಸಿದರೆ, ಉಭಯ ತಂಡಗಳು ಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಬಹುದು. ಆದರೆ ಅದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧ ಬಾಂಗ್ಲಾದೇಶ್ ತಂಡದ ಗೆಲುವನ್ನು ಪಾಕಿಸ್ತಾನ್ ಎದುರು ನೋಡಬೇಕಿದೆ. ಒಂದು ವೇಳೆ ಬಾಂಗ್ಲಾ ವಿರುದ್ಧ ನ್ಯೂಝಿಲೆಂಡ್ ಗೆದ್ದರೆ, ಪಾಕಿಸ್ತಾನ್ ತಂಡ ಅಧಿಕೃತವಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.
Published On - 9:54 am, Mon, 24 February 25