- Kannada News Photo gallery Cricket photos If New zealand Win Over Bangladesh, Pakistan Will Exit From Champions Trophy 2025
ನ್ಯೂಝಿಲೆಂಡ್ ಗೆದ್ದರೆ ಭಾರತ ಸೆಮೀಸ್ಗೆ, ಪಾಕಿಸ್ತಾನ್ ಮನೆಗೆ..!
India vs Pakistan: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಭಾನುವಾರ (ಫೆ.23) ಪಾಕಿಸ್ತಾನ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
Updated on:Feb 24, 2025 | 8:34 AM

ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಟೀಮ್ ಇಂಡಿಯಾ ಆಡಿದ ಎರಡೂ ಪಂದ್ಯಗಳಲ್ಲೂ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡ ಎರಡೂ ಮ್ಯಾಚ್ಗಳಲ್ಲೂ ಮುಗ್ಗರಿಸಿದೆ. ಪರಿಣಾಮ ಪಾಕಿಸ್ತಾನ್ ತಂಡ ಟೂರ್ನಿಯಿಂದಲೇ ಹೊರಬೀಳುವ ಹೊಸ್ತಿಲಲ್ಲಿದ್ದರೆ, ಭಾರತ ತಂಡವು ಸೆಮಿಫೈನಲ್ಗೇರುವ ಸನಿಹದಲ್ಲಿದೆ.

ಅದರಂತೆ ಇಂದು (ಫೆ.24) ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯವು ಟೀಮ್ ಇಂಡಿಯಾದ ಸೆಮಿಫೈನಲ್ ಹಾಗೂ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯವನ್ನು ನಿರ್ಧರಿಸಲಿದೆ. ಅಂದರೆ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆದ್ದರೆ, ಭಾರತ ತಂಡ ಸೆಮಿಫೈನಲ್ಗೇರುವುದು ಖಚಿತವಾಗಲಿದೆ.

ಏಕೆಂದರೆ ಭಾರತ ತಂಡವು ಈಗಾಗಲೇ 4 ಅಂಕಗಳನ್ನು ಹೊಂದಿದ್ದು, ಇದೀಗ ನ್ಯೂಝಿಲೆಂಡ್ ಕೂಡ 4 ಪಾಯಿಂಟ್ಸ್ ಪಡೆದರೆ ಉಭಯ ತಂಡಗಳು ಗ್ರೂಪ್-ಎ ನಿಂದ ಸೆಮಿಫೈನಲ್ಗೆ ಅರ್ಹತೆ ಪಡೆಯಲಿರುವುದು ಖಚಿತವಾಗಲಿದೆ. ಅತ್ತ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಇದಾಗ್ಯೂ ಮಾರ್ಚ್ 2 ರಂದು ಭಾರತ ಮತ್ತು ನ್ಯೂಝಿಲೆಂಡ್ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ಈ ಪಂದ್ಯದ ಫಲಿತಾಂಶ ಏನೇ ಹಾಗಿದ್ದರೂ ಟೀಮ್ ಇಂಡಿಯಾ ಮಾರ್ಚ್ 4 ರಂದು ಸೆಮಿಫೈನಲ್ ಆಡುವುದು ಬಹುತೇಕ ಖಚಿತ.

ಏಕೆಂದರೆ ಮೊದಲ ಸೆಮಿಫೈನಲ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದ್ದು, ಅದರಂತೆ ಈ ಪಂದ್ಯದಲ್ಲಿ ಒಂದು ಕಡೆ ಭಾರತ ತಂಡ ಕಾಣಿಸಿಕೊಳ್ಳಲಿದೆ ಎನ್ನಬಹುದು. ಇನ್ನು ಟೀಮ್ ಇಂಡಿಯಾಗೆ ಎದುರಾಳಿಯಾಗಿ ಗ್ರೂಪ್-ಬಿ ನಲ್ಲಿರುವ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ಅಫ್ಘಾನಿಸ್ತಾನ್ ತಂಡ ಕಣಕ್ಕಿಳಿಯಲಿದೆ.

ಅದರಂತೆ ಮಾರ್ಚ್ 4 ಮತ್ತು ಮಾರ್ಚ್ 5 ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ಕಣಕ್ಕಿಳಿಯಲಿರುವ ತಂಡಗಳಾವುವು ಎಂಬುದರ ಸ್ಪಷ್ಟ ಚಿತ್ರಣ ಶುಕ್ರವಾರ ಹೊರಬೀಳುವುದು ಖಚಿತ. ಇನ್ನು ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದ್ದು, ಟೀಮ್ ಇಂಡಿಯಾ ಫೈನಲ್ಗೇರಿದರೆ ಅಂತಿಮ ಹಣಾಹಣಿ ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಜರುಗಲಿದೆ.
Published On - 7:32 am, Mon, 24 February 25
























