Chris Lynn: ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದ ಕ್ರಿಸ್ ಲಿನ್
Chris Lynn Records: ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕ್ರಿಸ್ ಲಿನ್ 34 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 56 ರನ್ ಚಚ್ಚಿದ್ದರು.
Updated on: Jan 02, 2024 | 10:38 AM

ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಕ್ರಿಸ್ ಲಿನ್ ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಸಿಕ್ಸ್ ಸಿಡಿಸಿ ಎಂಬುದು ವಿಶೇಷ. ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಪರ ಆಡುತ್ತಿರುವ ಲಿನ್ 18ನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕ್ರಿಸ್ ಲಿನ್ 34 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 56 ರನ್ ಚಚ್ಚಿದ್ದರು. ಈ ವೇಳೆ ಬಾರಿಸಿದ ನಾಲ್ಕು ಸಿಕ್ಸರ್ಗಳೊಂದಿಗೆ ಬಿಬಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದರು.

ಹೌದು, ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ 200 ಸಿಕ್ಸ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಕ್ರಿಸ್ ಲಿನ್ ಪಾಲಾಗಿದೆ. ಬಿಬಿಎಲ್ನಲ್ಲಿ ಒಟ್ಟು 115 ಇನಿಂಗ್ಸ್ ಆಡಿರುವ ಲಿನ್ ಒಟ್ಟು 204 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಹಾಗೆಯೇ 292 ಫೋರ್ಗಳನ್ನು ಬಾರಿಸಿದ್ದಾರೆ.

ಅಷ್ಟೇ ಅಲ್ಲದೆ ಬಿಗ್ ಬ್ಯಾಷ್ ಲೀಗ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಕ್ರಿಸ್ ಲಿನ್ ಒಟ್ಟು 115 ಇನಿಂಗ್ಸ್ ಆಡಿದ್ದು, ಈ ವೇಳೆ ಒಂದು ಶತಕ ಹಾಗೂ 29 ಅರ್ಧಶತಕಗಳೊಂದಿಗೆ 3611 ರನ್ ಕಲೆಹಾಕಿದ್ದಾರೆ.

ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಕ್ಸರ್ ಕಿಂಗ್ ಹಾಗೂ ಟಾಪ್ ರನ್ ಸರದಾರ ಎನಿಸಿಕೊಂಡರೂ ಈ ಬಾರಿಯ ಐಪಿಎಲ್ಗೆ ಕ್ರಿಸ್ ಲಿನ್ ಆಯ್ಕೆಯಾಗಿಲ್ಲ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ 1.5 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಲಿನ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಇದಾಗ್ಯೂ ಬದಲಿ ಆಟಗಾರನಾಗಿ ಐಪಿಎಲ್ಗೆ ಎಂಟ್ರಿ ಕೊಡಲಿದ್ದಾರಾ ಕಾದು ನೋಡಬೇಕಿದೆ.



















