ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡಕ್ಕೆ RCB ಮಾಜಿ ಆಟಗಾರ ಕ್ಯಾಪ್ಟನ್..!
CPL 2025: ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುವ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಐಪಿಎಲ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ಟೀಮ್. ಈ ಫ್ರಾಂಚೈಸಿಯು ಇದೀಗ ಅನುಭವಿ ಆಲ್ರೌಂಡರ್ನನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಿದೆ. ಕಳೆದ ಸೀಸನ್ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು.
Updated on: Aug 09, 2025 | 10:10 AM

ಆಗಸ್ಟ್ 15 ರಿಂದ ಶುರುವಾಗಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ಗಾಗಿ ಸೇಂಟ್ ಲೂಸಿಯಾ ಕಿಂಗ್ಸ್ ಹೊಸ ನಾಯಕನನ್ನು ಘೋಷಿಸಿದೆ. ಅದು ಕೂಡ ಎರಡು ದೇಶಗಳನ್ನು ಪ್ರತಿನಿಧಿಸಿದ ಹಿರಿಯ ಆಟಗಾರರನ್ನು ಎಂಬುದು ವಿಶೇಷ. ಹೌದು, ಈ ಬಾರಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವುದು ಡೇವಿಡ್ ವೀಝ.

2013 ರಿಂದ 2016 ರವರೆಗೆ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ವೀಝ ಆ ಬಳಿಕ ನಮೀಬಿಯಾ ಪರ ಕಣಕ್ಕಿಳಿದಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ವೀಝ ಅವರಿಗೆ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ನಾಯಕತ್ವ ಒಲಿದಿದೆ. ಅದು ಕೂಡ ತಮ್ಮ 40ನೇ ವಯಸ್ಸಿನಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದಕ್ಕೂ ಮುನ್ನ, ಅಂದರೆ 2024 ರ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೇಂಟ್ ಲೂಸಿಯಾ ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು. ಫಾಫ್ ನಾಯಕತ್ವದಲ್ಲಿ ಕಳೆದ ಸೀಸನ್ನಲ್ಲಿ ಲೂಸಿಯಾ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾಗ್ಯೂ ಈ ಬಾರಿ ಫಾಫ್ ಡುಪ್ಲೆಸಿಸ್ ಅವರನ್ನು ಸೇಂಟ್ ಲೂಸಿಯಾ ಕಿಂಗ್ಸ್ ತಂಡದಲ್ಲಿ ಉಳಿಸಿಕೊಂಡಿಲ್ಲ. ಹೀಗಾಗಿ ಇದೀಗ ಅನುಭವಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಡೇವಿಡ್ ವೀಝ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.

ವಿಶೇಷ ಎಂದರೆ ಡೇವಿಡ್ ವೀಝ ಈ ಹಿಂದೆ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಐಪಿಎಲ್ 2015 ಹಾಗೂ 2016 ರಲ್ಲಿ ಆರ್ಸಿಬಿ ಪರ ಒಟ್ಟು 15 ಪಂದ್ಯಗಳನ್ನಾಡಿ 16 ವಿಕೆಟ್ಗಳನ್ನು ಕಬಳಿಸಿದ್ದರು. ಅಲ್ಲದೆ ಬ್ಯಾಟಿಂಗ್ನಲ್ಲಿ 127 ರನ್ಗಳಿಸಿದ್ದರು. ಇದಾದ ಬಳಿಕ ಐಪಿಎಲ್ನಿಂದ ಹೊರಬಿದ್ದಿದ್ದ ವೀಝ ಅವರು 2023 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾಯಕನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಸೇಂಟ್ ಲೂಸಿಯಾ ಕಿಂಗ್ಸ್ ತಂಡ: ಡೇವಿಡ್ ವೀಝ (ನಾಯಕ). ಟಿಮ್ ಡೇವಿಡ್, ರೋಸ್ಟನ್ ಚೇಸ್, ಟಿಮ್ ಸೈಫರ್ಟ್, ಜಾನ್ಸನ್ ಚಾರ್ಲ್ಸ್, ಅಲ್ಝಾರಿ ಜೋಸೆಫ್, ತಬ್ರೇಝ್ ಶಮ್ಸಿ, ಡೆಲಾನೊ ಪೊಟ್ಗೀಟರ್, ಮ್ಯಾಥ್ಯೂ ಫೋರ್ಡ್, ಆರೋನ್ ಜೋನ್ಸ್, ಖಾರಿ ಪಿಯರೆ, ಜಾವೆಲ್ಲೆ ಗ್ಲೆನ್, ಮೈಕಾ ಮೆಕೆಂಜಿ, ಶಾಡ್ರ್ಯಾಕ್ ಡೆಸ್ಕಾರ್ಟೆ, ಜೋಹಾನ್ ಜೆರೆಮಿಯಾ, ಕಿಯೋನ್ ಗ್ಯಾಸ್ಟನ್, ಅಕೀಮ್ ಆಗಸ್ಟೆ.




