ಮೆಲ್ಬೋರ್ನ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಈ ದ್ವಿಶತಕದೊಂದಿಗೆ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ವಾರ್ನರ್ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಬರೆದಿದ್ದು ಇಂಗ್ಲೆಂಡ್ನ ಜೋ ರೂಟ್. 2021 ರಲ್ಲಿ 100ನೇ ಟೆಸ್ಟ್ ಪಂದ್ಯವಾಡಿದ್ದ ರೂಟ್ ಆ ಮ್ಯಾಚ್ನಲ್ಲಿ ದ್ವಿಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ಬರೆದಿದ್ದರು. ಇದೀಗ ಈ ಸಾಧನೆಯನ್ನು ಡೇವಿಡ್ ವಾರ್ನರ್ ಸರಿಗಟ್ಟಿದ್ದಾರೆ.
ಅಷ್ಟೇ ಅಲ್ಲದೆ ಈ ಡಬಲ್ ಸೆಂಚುರಿಯ ಮೂಲಕ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅಪರೂಪದ ವಿಶ್ವ ದಾಖಲೆಯನ್ನು ಕೂಡ ವಾರ್ನರ್ ಸರಿಗಟ್ಟಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ಶತಕ ಪೂರೈಸುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇದೀಗ ವಾರ್ನರ್ ಅಗ್ರಸ್ಥಾನಕ್ಕೇರಿದ್ದಾರೆ. ಅದು ಕೂಡ ಸಚಿನ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದೇ ಇಲ್ಲಿ ವಿಶೇಷ.
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (ಏಕದಿನ) ಆರಂಭಿಕರಾಗಿ ಒಟ್ಟು 45 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ಧದ ಶತಕದೊಂದಿಗೆ ವಾರ್ನರ್ ಕೂಡ ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದು ಒಟ್ಟು 45 ಶತಕಗಳನ್ನು ಪೂರೈಸಿದ್ದಾರೆ. ಈ ಮೂಲಕ ಸಚಿನ್ ಹೆಸರಿನಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಕ್ರಿಸ್ ಗೇಲ್ ಇದ್ದಾರೆ. ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕರಾಗಿ 42 ಸೆಂಚುರಿ ಸಿಡಿಸಿದ್ದಾರೆ. ಇದೀಗ ಆರಂಭಿಕರಾಗಿ 45 ಶತಕ ಬಾರಿಸಿರುವ ವಾರ್ನರ್ ಇನ್ನೊಂದು ಶತಕ ಸಿಡಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ.
Published On - 3:53 pm, Tue, 27 December 22