
ಐಪಿಎಲ್ ಮೆಗಾ ಹರಾಜಿನ ಎರಡನೇ ದಿನದ ಕೊನೆಯ ಕ್ಷಣದಂದು ಮತ್ತೊಬ್ಬ ಕನ್ನಡಿಗನನ್ನು ಖರೀದಿಸುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ತನ್ನ ಐಪಿಎಲ್ ವೃತ್ತಿಜೀವನವನ್ನು ಆರ್ಸಿಬಿಯಿಂದಲೇ ಆರಂಭಿಸಿದ್ದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಆರ್ಸಿಬಿ ಮೂಲ ಬೆಲೆ 2 ಕೋಟಿ ರೂ. ನೀಡಿ ಖರೀದಿಸಿದೆ.

ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಪಡಿಕ್ಕಲ್ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಇದರ ಜೊತೆಗೆ ಸಿಕ್ಕ ಅವಕಾಶಗಳನ್ನು ಅವರು ಸದುಪಯೋಗಪಡಿಸಿಕೊಂಡಿರಲಿಲ್ಲ. ಹೀಗಾಗಿ ಲಕ್ನೋ ಫ್ರಾಂಚೈಸಿ ಪಡಿಕ್ಕಲ್ರನ್ನು ತಂಡದಿಂದ ಬಿಡುಗಡೆ ಮಾಡಿತ್ತು.

ಆದಾಗ್ಯೂ 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ದೇವದತ್ ಪಡಿಕ್ಕಲ್ ಅವರನ್ನು ಮೊದಲ ಸುತ್ತಿನಲ್ಲಿ ಯಾವುದೇ ತಂಡ ಖರೀದಿಸಿರಲಿಲ್ಲ. ಹೀಗಾಗಿ ಅವರ ಖರೀದಿಯಾಗದೆ ಉಳಿದಿದ್ದರು. ಆದರೆ ದಿನದ ಕೊನೆಯಲ್ಲಿ ಮತ್ತೆ ಹರಾಜಿಗೆ ಬಂದ ಪಡಿಕ್ಕಲ್ರನ್ನು ಆರ್ಸಿಬಿ ಖರೀದಿಸಿತು.

ವಾಸ್ತವವಾಗಿ ದೇವದತ್ ಪಡಿಕ್ಕಲ್ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. 2020 ರ ಐಪಿಎಲ್‌ನಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಪಡಿಕ್ಕಲ್, ತನ್ನ ಚೊಚ್ಚಲ ಐಪಿಎಲ್ ಋತುವಿನಲ್ಲಿಯೇ ಐದು ಅರ್ಧ ಶತಕಗಳ ಸಹಾಯದಿಂದ 473 ರನ್ಗಳನ್ನು ಸಿಡಿಸಿದ್ದರು.

ನಂತರದ ಆವೃತ್ತಿಯಲ್ಲೂ ಆರ್ಸಿಬಿ ಪರ ಅಬ್ಬರಿಸಿದ್ದ ಪಡಿಕ್ಕಲ್, ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ ಒಟ್ಟು 411 ರನ್‌ಗಳನ್ನು ಗಳಿಸಿದ್ದರು.ಆರ್ಸಿಬಿ ಪರ ಆಡಿದ್ದ ಎರಡು ಸೀಸನ್‌ಗಳಲ್ಲಿ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು 2022 ರ ಮೆಗಾ ಹರಾಜಿಗೂ ಮೊದಲು ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿತ್ತು.

ಆ ಬಳಿಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದ ಪಡಿಕ್ಕಲ್, ಮೊದಲ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2022 ರ ಐಪಿಎಲ್‌ನಲ್ಲಿ 376 ರನ್ ಬಾರಿಸಿದ್ದ ಪಡಿಕ್ಕಲ್, ಐಪಿಎಲ್ 2023 ರಲ್ಲಿ 261 ರನ್ ಕಲೆಹಾಕಿದ್ದರು. ಆದಾಗ್ಯೂ 2024 ರಲ್ಲಿ ಲಕ್ನೋ ತಂಡವನ್ನು ಸೇರಿಕೊಂಡಿದ್ದ ಪಡಿಕ್ಕಲ್ 7 ಪಂದ್ಯಗಳನ್ನು ಆಡಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.