ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ದಾಂಪತ್ಯ ಜೀವನದ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವುದು ಗೊತ್ತೇ ಇದೆ. ಈ ವಿಚ್ಛೇದನದ ವದಂತಿಗಳ ಮಧ್ಯೆ ಚಹಲ್, ಆರ್‌ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಈ ಸಂಚಲನದ ಬೆನ್ನಲ್ಲೇ ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಪತಿ ಯುಜ್ವೇಂದ್ರ ಚಹಲ್ ಅವರ ಫೋಟೋಗಳನ್ನು ಮತ್ತೆ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಇನ್ಸ್ಟಾಗ್ರಾಮ್ನಲ್ಲಿ ಧನಶ್ರೀ, ಚಹಲ್ ಜೊತೆಗಿನ ಫೋಟೋಗಳನ್ನು ಆರ್ಕೈವ್ ಮಾಡಿಕೊಂಡಿದ್ದರು.
ಆದರೆ ಯಾವಾಗ ಆರ್‌ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡರೋ, ಧನಶ್ರೀ ವರ್ಮಾ ಯುಜ್ವೇಂದ್ರ ಚಹಲ್ ಜೊತೆಗಿನ ಎಲ್ಲಾ ಫೋಟೋಗಳನ್ನು ಮತ್ತೆ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಪ್ರಾರಂಭಿಸಿದೆ.
ಇದರೊಂದಿಗೆ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇನ್ನೂ ಸಹ ಬೇರ್ಪಟ್ಟಿಲ್ಲ ಎಂಬುದು ಸಹ ಖಚಿತವಾಗಿದೆ. ಸದ್ಯದ ಮಾಹಿತಿ ಪ್ರಕಾರ ಡೈವೋರ್ಸ್ ಅರ್ಜಿಯು ಕೋರ್ಟ್ನಲ್ಲಿದ್ದು, ಅಂತಿಮ ತೀರ್ಪು ಇನ್ನಷ್ಟೇ ಬರಬೇಕಿದೆ. ಹೀಗಾಗಿಯೇ ಧನಶ್ರೀ ವರ್ಮಾ, ಚಹಲ್ ಜೊತೆಗಿನ ಹಳೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಯುಜ್ವೇಂದ್ರ ಚಹಲ್ ಹೆಸರು ರೇಡಿಯೋ ಜಾಕಿ ಮಹ್ವಾಶ್ ಅವರೊಂದಿಗೆ ತಳುಕು ಹಾಕಿಕೊಂಡಿದ್ದು, ಇದರ ಬೆನ್ನಲ್ಲೇ ಪತ್ನಿ ಧನಶ್ರೀ ವರ್ಮಾ ರಂಗ ಪ್ರವೇಶ ಮಾಡಿದ್ದಾರೆ. ಹೀಗಾಗಿ ಈ ವಿಚ್ಛೇದನ ಸುದ್ದಿ ಎಲ್ಲಿ ಹೋಗಿ ಮುಟ್ಟಲಿದೆಯೋ ಕಾದು ನೋಡಬೇಕಿದೆ.