ನಮ್ಮ ತಂಡವನ್ನು ಖರೀದಿಸಿ, ಹೆಸರನ್ನೂ ಬದಲಿಸಿ: IPL ಫ್ರಾಂಚೈಸಿಗಳಿಗೆ ಬಿಗ್ ಆಫರ್
The Hundred: ದಿ ಹಂಡ್ರೆಡ್ ಲೀಗ್ ಶುರುವಾಗಿ 4 ವರ್ಷಗಳಾಗಿವೆ. 2021 ರಿಂದ ಆರಂಭವಾದ ಈ ಟೂರ್ನಿಯಲ್ಲಿ ಈಗಾಗಲೇ ಮೂರು ಆವೃತ್ತಿಗಳನ್ನು ಆಡಲಾಗಿದ್ದು, ಇದೀಗ ನಾಲ್ಕನೇ ಸೀಸನ್ ಚಾಲ್ತಿಯಲ್ಲಿದೆ. ಇದಾಗ್ಯೂ ಕಳೆದ ಮೂರು ವರ್ಷಗಳಲ್ಲಿ ದಿ ಹಂಡ್ರೆಡ್ ಲೀಗ್ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿಯೇ ಇದೀಗ ಇಸಿಬಿ ಐಪಿಎಲ್ ಫ್ರಾಂಚೈಸಿಗಳು ತಂಡಗಳ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ.
Updated on:Aug 18, 2024 | 1:45 PM

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ನ 8 ತಂಡಗಳ ಷೇರುಗಳನ್ನು ಮಾರಾಟ ಮಾಡಲು ಇಸಿಬಿ ನಿರ್ಧರಿಸಿದೆ. ಇದಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿಗಳೊಂದಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಾತುಕತೆಯನ್ನು ಸಹ ನಡೆಸಿದೆ ಎಂದು ವರದಿಯಾಗಿದೆ.

ಈ ಮಾತುಕತೆಯಲ್ಲಿ ಇಸಿಬಿ ತಮ್ಮ ತಂಡಗಳ ಷೇರುಗಳನ್ನು ಖರೀದಿಸುವಂತೆ ಐಪಿಎಲ್ ಮಾಲೀಕರಲ್ಲಿ ಮನವಿ ಮಾಡಿದೆ. ಈ ಮೂಲಕ ಐಪಿಎಲ್ಗೆ ಪರ್ಯಾಯವಾಗಿ ದಿ ಹಂಡ್ರೆಡ್ ಲೀಗ್ ಅನ್ನು ಬೆಳೆಸುವಂತೆ ಫ್ರಾಂಚೈಸಿಗಳಿಗೆ ಬಿಗ್ ಆಫರ್ ನೀಡಿದೆ ಎಂದು ತಿಳಿದು ಬಂದಿದೆ.

ಇನ್ನು ಈ ತಂಡಗಳ ಷೇರು ಖರೀದಿ ಬಳಿಕ ಆಯಾ ತಂಡಗಳ ಹೆಸರನ್ನು ಬದಲಿಸಲು ಅವಕಾಶ ನೀಡುವುದಾಗಿಯೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಅಂದರೆ ಐಪಿಎಲ್ ಫ್ರಾಂಚೈಸಿಗಳ ಮಾಲೀಕತ್ವದಲ್ಲಿರುವ ತಂಡಗಳು ತಮ್ಮ ಟ್ರೇಡ್ ಮಾರ್ಕ್ ಹೆಸರುಗಳನ್ನು ಮುಂದುವರೆಸುವುದು ವಾಡಿಕೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ತಂಡಗಳನ್ನು ಹೊಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳು, ಅಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್, ಸೇಂಟ್ ಲೂಸಿಯಾ ಕಿಂಗ್ಸ್, ಬಾರ್ಡೋಸ್ ರಾಯಲ್ಸ್ ಹೆಸರಿನಲ್ಲಿ ತಂಡಗಳನ್ನು ಕಣಕ್ಕಿಳಿಸಿದೆ.

ಹಾಗೆಯೇ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಕೇಪ್ಟೌನ್ ಹೆಸರಿನ ತಂಡ ಹೊಂದಿದ್ದರೆ, ಸಿಎಸ್ಕೆ ಫ್ರಾಂಚೈಸಿಯು ಜೋಬರ್ಗ್ ಸೂಪರ್ ಕಿಂಗ್ಸ್ ಹೆಸರಿನಲ್ಲಿ ತಂಡವನ್ನು ಕಣಕ್ಕಿಳಿಸುತ್ತಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕತ್ವದ ಡರ್ಬನ್ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಒಡೆತನದ ಪಾರ್ಲ್ ರಾಯಲ್ಸ್ ತಂಡಗಳು ಎಸ್ಎ ಟಿ20 ಲೀಗ್ನಲ್ಲಿ ಕಣಕ್ಕಿಳಿಯುತ್ತಿವೆ. ಹೀಗಾಗಿಯೇ ದಿ ಹಂಡ್ರೆಡ್ ಲೀಗ್ನಲ್ಲಿ ತಂಡಗಳನ್ನು ಖರೀದಿಸಿದರೆ ಪ್ರಸ್ತುತ ಇರುವ ಹೆಸರು ಬದಲಿಸಲು ಅವಕಾಶ ನೀಡುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಒಟ್ಟಿನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 5ನೇ ಸೀಸನ್ ದಿ ಹಂಡ್ರೆಡ್ ಲೀಗ್ಗೂ ಮುನ್ನ ತಂಡಗಳ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು, ಈ ಮೂಲಕ ತಮ್ಮಲ್ಲಿ ಹೂಡಿಕೆ ಮಾಡುವಂತೆ ಐಪಿಎಲ್ ಫ್ರಾಂಚೈಸಿಗಳಿಗೆ ಬಿಗ್ ಆಫರ್ ನೀಡಿದೆ. ಈ ಆಫರ್ ಅನ್ನು ಐಪಿಎಲ್ ಫ್ರಾಂಚೈಸಿಗಳು ಹೇಗೆ ಸ್ವೀಕರಿಸಲಿದ್ದಾರೆ? ಯಾರೆಲ್ಲಾ ತಂಡಗಳನ್ನು ಖರೀದಿಸಲಿದ್ದಾರೆ ಕಾದು ನೋಡಬೇಕಿದೆ.

ಅಂದಹಾಗೆ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ದಿ ಹಂಡ್ರೆಡ್ ಲೀಗ್ ಶುರುವಾಗಿ 4 ವರ್ಷಗಳಾಗಿವೆ. 2021 ರಿಂದ ಆರಂಭವಾದ ಈ ಟೂರ್ನಿಯಲ್ಲಿ ಈಗಾಗಲೇ ಮೂರು ಆವೃತ್ತಿಗಳನ್ನು ಆಡಲಾಗಿದ್ದು, ಇದೀಗ ನಾಲ್ಕನೇ ಸೀಸನ್ ಚಾಲ್ತಿಯಲ್ಲಿದೆ. ಇದಾಗ್ಯೂ ಕಳೆದ ಮೂರು ವರ್ಷಗಳಲ್ಲಿ ದಿ ಹಂಡ್ರೆಡ್ ಲೀಗ್ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿಯೇ ಇದೀಗ ಇಸಿಬಿ ಐಪಿಎಲ್ ಫ್ರಾಂಚೈಸಿಗಳು ತಂಡಗಳ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ.
Published On - 9:53 am, Sun, 18 August 24
