
ಭಾರತೀಯ ಕ್ರಿಕೆಟ್‌ನಲ್ಲಿ ಶುಭ್ಮನ್ ಗಿಲ್ ಯುಗ ಅಧಿಕೃತವಾಗಿ ಆರಂಭವಾಗಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದ ಗಿಲ್, ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಹಾಗೆಯೇ ಗಿಲ್‌ಗೆ ಟಿ20 ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ.

ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಿಲ್ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆಯೇ? ಎಂಬುದು ಕೋಟ್ಯಾಂತರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುಂಚೆಯೇ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗಿಲ್ ನಾಯಕತ್ವದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಅಕ್ಟೋಬರ್ 19 ರಂದು ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸವು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಆರಂಭವಾಗಲಿದ್ದು, ನಂತರ ಟಿ20 ಸರಣಿ ನಡೆಯಲಿದೆ. ಈ ಸರಣಿಯೊಂದಿಗೆ ಗಿಲ್ ಅವರ ಏಕದಿನ ನಾಯಕನ ಅಧಿಕಾರಾವಧಿಯೂ ಪ್ರಾರಂಭವಾಗುತ್ತದೆ. ಆದ್ದರಿಂದ, ರೋಹಿತ್ ಮತ್ತು ವಿರಾಟ್ ಅವರ ಪ್ರದರ್ಶನದ ಜೊತೆಗೆ, ಗಿಲ್ ನಾಯಕತ್ವದಲ್ಲಿ ಭಾರತೀಯ ತಂಡದ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು.

ಆದಾಗ್ಯೂ, ಸರಣಿ ಆರಂಭವಾಗುವ ಮೊದಲೇ ಆಸ್ಟ್ರೇಲಿಯಾದ ಮಾಜಿ ಆಟಗಾರರು ಈಗಾಗಲೇ ತಮ್ಮ ಹೇಳಿಕೆಗಳಿಂದ ಟೀಂ ಇಂಡಿಯಾವನ್ನು ಲೇವಡಿ ಮಾಡಲು ಆರಂಭಿಸಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಒಳಗೊಂಡ ಜಾಹೀರಾತು ಈಗಾಗಲೇ ಪ್ರಸಾರವಾಗುತ್ತಿದೆ, ಅದರಲ್ಲಿ ಅವರು ರೋಹಿತ್ ಮತ್ತು ವಿರಾಟ್ ಅವರನ್ನು ಟೀಕಿಸಿದ್ದಾರೆ.

ಇದರ ಜೊತೆಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್, ನಾಯಕನಾಗಿ ಗಿಲ್‌ಗೆ ಸೋಲಿನ ಆರಂಭ ಸಿಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಫಿಂಚ್, ‘ಇದು ಉತ್ತಮ ಸರಣಿಯಾಗಲಿದೆ. ಭಾರತದ ವಿರುದ್ಧದ ಸರಣಿಯಿಂದರೇ ಅದಕ್ಕಿರುವ ಮಹತ್ವವೇ ಬೇರೆ. ಹಾಗೆಯೇ ಈ ಸರಣಿಯಲ್ಲಿ ವಿರಾಟ್ ಆಡುತ್ತಿದ್ದಾರೆ, ಅವರು ಯಾವಾಗಲೂ ಆಸ್ಟ್ರೇಲಿಯಾ ವಿರುದ್ಧ ಉತ್ತಮವಾಗಿ ಆಡುತ್ತಾರೆ.

ನೀವು ಕಾಗದದ ಮೇಲೆ ನೋಡಿದಾಗಲೆಲ್ಲಾ ಇದು ಯಾವಾಗಲೂ ಉತ್ತಮ ಸ್ಪರ್ಧೆಯಂತೆ ಕಾಣುತ್ತದೆ. ಆದರೆ ಆಸ್ಟ್ರೇಲಿಯಾ ಸರಣಿಯನ್ನು 2-1 ಅಂತರದಿಂದ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಇದು ಸುಲಭವಲ್ಲ ಏಕೆಂದರೆ ಭಾರತ ಬಲಿಷ್ಠ ತಂಡವಾಗಿದೆ. ಹೀಗಾಗಿ ಇದು ಉತ್ತಮ ಸರಣಿಯಾಗಲಿದೆ ಎಂದಿದ್ದಾರೆ.

ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಏಕದಿನ ಸರಣಿ ಆರಂಭವಾಗಲಿದ್ದು, ಮುಂದಿನ ಪಂದ್ಯ ಅಕ್ಟೋಬರ್ 23 ರಂದು ಅಡಿಲೇಡ್‌ನಲ್ಲಿ ನಡೆಯಲಿದೆ. ಸರಣಿಯ ಅಂತಿಮ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿದೆ. 2019 ರ ನಂತರ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಆ ಸಮಯದಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರು. ಶುಭ್ಮನ್ ಗಿಲ್ ಆ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು.