- Kannada News Photo gallery Cricket photos Team India Future: Rohit, Kohli's ODI Exit? Gambhir-Agarkar's Secret Strategy
ಗಂಭೀರ್- ಅಗರ್ಕರ್ ರಹಸ್ಯ ಯೋಜನೆ; ಕೊಹ್ಲಿ, ರೋಹಿತ್‌ಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆಯ ಸರಣಿ
Rohit Sharma, Virat Kohli Last ODI Series: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯೊಂದಿಗೆ ತಮ್ಮ ಅಂತರಾಷ್ಟ್ರೀಯ ಏಕದಿನ ವೃತ್ತಿಜೀವನಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. 2027ರ ವಿಶ್ವಕಪ್‌ಗೆ ಯುವ ತಂಡವನ್ನು ರೂಪಿಸುವ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಅವರ ರಹಸ್ಯ ಯೋಜನೆಯ ಭಾಗವಾಗಿ ಇದು ನಡೆಯಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ಹೊಸ ಯುಗಕ್ಕೆ ಸಜ್ಜಾಗುತ್ತಿದೆ.
Updated on: Oct 06, 2025 | 5:56 PM

ಟೀಂ ಇಂಡಿಯಾದ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸುಮಾರು ಏಳು ತಿಂಗಳ ನಂತರ ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತೀಯ ಏಕದಿನ ತಂಡದಲ್ಲಿ ಇಬ್ಬರೂ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಈ ಪ್ರವಾಸದ ನಂತರ ರೋಹಿತ್ ಮತ್ತು ವಿರಾಟ್ ಮತ್ತೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿಯೇ ಉಳಿದಿದೆ.

ವಾಸ್ತವವಾಗಿ, 2027 ರ ಏಕದಿನ ವಿಶ್ವಕಪ್‌ನ ಯೋಜನೆಯ ಭಾಗವಾಗಿ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲೇ ರೋಹಿತ್ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಗಿದೆ. ಇದೆಲ್ಲದರ ನಡುವೆ, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನಡುವಿನ ರಹಸ್ಯ ಯೋಜನೆಯ ಬಗ್ಗೆ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ.

ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರೋಹಿತ್ ಮತ್ತು ಕೊಹ್ಲಿ ಅವರ ವೃತ್ತಿಜೀವನದ ಕೊನೆಯ ಸರಣಿ ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬಿಸಿಸಿಐ, ಈ ಪ್ರವಾಸವನ್ನು 2027 ರ ವಿಶ್ವಕಪ್‌ಗೆ ಸಿದ್ಧತೆಗಳ ಆರಂಭವೆಂದು ಪರಿಗಣಿಸುತ್ತಿದ್ದು, ಈ ಇಬ್ಬರು ಆಟಗಾರರು ಈ ಯೋಜನೆಯ ಭಾಗವಾಗಿಲ್ಲ ಎಂದು ಹೇಳಲಾಗುತ್ತಿದೆ.

ಹಾಗಾಗಿಯೇ ರೋಹಿತ್ ಬದಲಿಗೆ ಶುಭಮನ್ ಗಿಲ್‌ಗೆ ನಾಯಕತ್ವ ನೀಡಲಾಗಿದೆ. ಟೆಲಿಗ್ರಾಫ್ ವರದಿಯ ಪ್ರಕಾರ , ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ರೂಪಿಸಿದ ರಹಸ್ಯ ತಂತ್ರದ ಭಾಗವಾಗಿ, ಇಬ್ಬರೂ ಆಟಗಾರರನ್ನು ಈ ಸರಣಿಯ ನಂತರ ಏಕದಿನ ತಂಡದಿಂದ ಹೊರಗಿಡಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಮಂಡಳಿಯ ಉನ್ನತ ಅಧಿಕಾರಿಗಳಿಂದ ಹಸಿರು ನಿಶಾನೆ ದೊರೆತಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027 ರ ವಿಶ್ವಕಪ್‌ಗಾಗಿ ಭಾರತದ ಯೋಜನೆಗಳಲ್ಲಿ ಇಬ್ಬರೂ ಆಟಗಾರರು ಇಲ್ಲ. ಏಕೆಂದರೆ ಆ ವೇಳೆಗೆ ರೋಹಿತ್‌ಗೆ 40 ವರ್ಷ ವಯಸ್ಸಾಗಿದ್ದರೆ, ಕೊಹ್ಲಿಗೆ 39 ವರ್ಷ ವಯಸ್ಸಾಗಿರುತ್ತದೆ. ಏತನ್ಮಧ್ಯೆ, ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಇಬ್ಬರೂ ಆಟಗಾರರು ಸ್ಥಿರವಾಗಿ ಆಡುವುದು ಸವಾಲಿನ ಸಂಗತಿಯಾಗಿದೆ. ಅಲ್ಲದೆ ಇವರಿಬ್ಬರ ಸ್ಥಾನಕ್ಕೆ ಹಲವು ಯುವ ಆಟಗಾರರು ಕಾಯುತ್ತಿದ್ದಾರೆ.

ಇದಲ್ಲದೆ, ಶುಭ್ಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸುವ ನಿರ್ಧಾರವನ್ನು ಈ ಮೊದಲೇ ತೆಗೆದುಕೊಳ್ಳಲಾಗಿದೆ. ರೋಹಿತ್ ಅವರಿಗೆ ಈ ನಿರ್ಧಾರವನ್ನು ಮುಂಚಿತವಾಗಿ ತಿಳಿಸಲಾಗಿದೆ. ಇದಕ್ಕೆ ಪೂರಕವಾಗಿ ಕೆಲವು ತಿಂಗಳ ಹಿಂದೆ, ಆಸ್ಟ್ರೇಲಿಯಾ ಸರಣಿಯು ಈ ಅನುಭವಿ ಆಟಗಾರರಿಗೆ ಕೊನೆಯ ಸರಣಿಯಾಗಬಹುದು ಎಂದು ವರದಿಯೊಂದು ಸೂಚಿಸಿತ್ತು. ಇದೀಗ ಆ ವರದಿ ನಿಜವಾಗುವ ಎಲ್ಲಾ ಮುನ್ಸೂಚನೆಗಳು ಸಿಗುತ್ತಿವೆ.

ಇನ್ನು ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಂ ಇಂಡಿಯಾ ನವೆಂಬರ್-ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಮತ್ತು ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅಷ್ಟೇ ಸಂಖ್ಯೆಯ ಪಂದ್ಯಗಳನ್ನು ಆಡಲಿದೆ. ರೋಹಿತ್ ಮತ್ತು ವಿರಾಟ್ ಈ ಪ್ರವಾಸದ ಭಾಗವಾಗುತ್ತಾರೆಯೇ ಎಂಬುದು ಭಾಗಶಃ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರ ಪ್ರದರ್ಶನವನ್ನು ಅವಲಂಬಿಸಿರುತ್ತದೆ.
