
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಿಂದ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆಟಗಾರ ಗ್ಲೆನ್ ಫಿಲಿಪ್ಸ್ (Glenn Phillips) ಹೊರಬಿದ್ದಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಫಿಲಿಪ್ಸ್ ಗಾಯಗೊಂಡಿದ್ದರು. ಈ ಗಾಯದ ಕಾರಣ ಇದೀಗ ಅವರು ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಈ ಬಾರಿಯ ಐಪಿಎಲ್ನಲ್ಲಿ ಗ್ಲೆನ್ ಫಿಲಿಪ್ಸ್ ಒಂದೇ ಒಂದು ಪಂದ್ಯವಾಡಿಲ್ಲ ಎಂಬುದು. ಅಂದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಬದಲಿ ಫೀಲ್ಡರ್ ಆಗಿ ಕಾಣಿಸಿಕೊಂಡಿದ್ದರು. ಈ ವೇಳೆ ಚೆಂಡು ಹಿಡಿಯುವ ಯತ್ನದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.

ಸ್ನಾಯು ಸೆಳೆತದಿಂದ ಮೈದಾನದಲ್ಲೇ ಕುಸಿದು ಬಿದ್ದ ಗ್ಲೆನ್ ಫಿಲಿಪ್ಸ್ ಆ ಬಳಿಕ ಮೈದಾನ ತೊರೆದಿದ್ದರು. ಇದೀಗ ಅವರ ವೈದ್ಯಕೀಯ ರಿಪೋರ್ಟ್ಗಳು ಬಂದಿದ್ದು, ಈ ವರದಿಯಲ್ಲಿ ಹೆಚ್ಚಿನ ವಿಶ್ರಾಂತಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಗ್ಲೆನ್ ಫಿಲಿಪ್ಸ್ ನ್ಯೂಝಿಲೆಂಡ್ಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಗ್ಲೆನ್ ಫಿಲಿಪ್ಸ್ ಅವರನ್ನು ಬರೋಬ್ಬರಿ 2 ಕೋಟಿ ರೂ.ಗೆ ಖರೀದಿಸಿದೆ. ಅದರಂತೆ ಇದೇ ಮೊದಲ ಬಾರಿಗೆ ಜಿಟಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದರು. ಆದರೆ ದುರಾದೃಷ್ಟವಶಾತ್ ಇದೀಗ ಗಾಯಗೊಂಡು ಗ್ಲೆನ್ ಫಿಲಿಪ್ಸ್ ಐಪಿಎಲ್ನಿಂದ ಹಿಂದೆ ಸರಿದ್ದಾರೆ.

ಗ್ಲೆನ್ ಫಿಲಿಪ್ಸ್ ಅನುಪಸ್ಥಿತಿಯ ಕಾರಣ ಇದೀಗ ಗುಜರಾತ್ ಟೈಟಾನ್ಸ್ ಬದಲಿ ವಿದೇಶಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಏಕೆಂದರೆ ಜಿಟಿ ತಂಡದಲ್ಲಿ ಜೋಸ್ ಬಟ್ಲರ್, ಶೆರ್ಫೇನ್ ರದರ್‌ಫೋರ್ಡ್, ರಶೀದ್ ಖಾನ್ ಬಿಟ್ಟರೆ ಉತ್ತಮ ವಿದೇಶಿ ಆಟಗಾರರಿಲ್ಲ. ಹೀಗಾಗಿ ಫಿಲಿಪ್ಸ್ ಸ್ಥಾನದಲ್ಲಿ ಮತ್ತೋರ್ವ ವಿದೇಶಿ ಸ್ಟಾರ್ ಬ್ಯಾಟ್ಸ್ಮನ್ ಅಥವಾ ಆಲ್ರೌಂಡರ್ನನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.