IPL 2025: ಗ್ರೀನ್ ಜೆರ್ಸಿಯಲ್ಲಿ RCB ಗೆಲ್ಲೋದು ಡೌಟ್..!
IPL 2025 RCB vs RR: ಇಂಡಿಯನ್ ಪ್ರೀಮಿಯರ್ ಲೀಗ್ನ 28ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೋ ಗ್ರೀನ್ ಅಭಿಯಾನದ ಭಾಗವಾಗಿ ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
Updated on: Apr 13, 2025 | 12:23 PM

IPL 2025: ಐಪಿಎಲ್ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡ ಹಸಿರು ಉಡುಪಿನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಇದುವೇ ಇದೀಗ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಗ್ರೀನ್ ಜೆರ್ಸಿ ಅದೃಷ್ಟವಲ್ಲ ಎಂಬ ಮಾತಿದೆ. ಇದಕ್ಕೆ ಮುಖ್ಯ ಕಾರಣ ವಿಶೇಷ ಜೆರ್ಸಿಯಲ್ಲಿ ಆರ್ಸಿಬಿ ಕಣಕ್ಕಿಳಿದಾಗ ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಅಂದರೆ 2011 ರಿಂದ ಆರ್ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗ್ರೀನ್ ಜೆರ್ಸಿಯಲ್ಲಿ ಈವರೆಗೆ 14 ಪಂದ್ಯಗಳನ್ನಾಡಿದ್ದು, ಈ ವೇಳೆ ನಾಲ್ಕು ಬಾರಿ ಮಾತ್ರ ಗೆಲುವು ಸಾಧಿಸಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ ಒಂದು ಪಂದ್ಯದಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ.

ಅದರಲ್ಲೂ ಕಳೆದ 5 ಸೀಸನ್ಗಳಲ್ಲಿ ಆರ್ಸಿಬಿ ತಂಡವು ವಿಶೇಷ ಜೆರ್ಸಿಯಲ್ಲಿ ಕಣಕ್ಕಿಳಿದಾಗ 3 ಬಾರಿ ಸೋಲನುಭವಿಸಿದೆ. ಅಲ್ಲದೆ ಕಳೆದ ಸೀಸನ್ನಲ್ಲಿ ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದಾಗ ಕೆಕೆಆರ್ ವಿರುದ್ಧ 1 ರನ್ನಿಂದ ಸೋಲನುಭವಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದೀಗ 16ನೇ ಬಾರಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗಿದೆ. ಅದು ಸಹ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ವಿರುದ್ಧ. ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಗ್ರೀನ್ ಜೆರ್ಸಿ ಅನ್ಲಕ್ಕಿ ಎಂಬ ವಾದವನ್ನು ತೊಡೆದು ಹಾಕುತ್ತಾರಾ ಕಾದು ನೋಡಬೇಕಿದೆ.

ಆರ್ಸಿಬಿ ತಂಡದ ಗ್ರೀನ್ ಜೆರ್ಸಿ ಪಂದ್ಯಗಳ ಫಲಿತಾಂಶ: 2011 ರಲ್ಲಿ ಗೆಲುವು, 2012 ರಲ್ಲಿ ಸೋಲು, 2013 ರಲ್ಲಿ ಸೋಲು, 2014 ರಲ್ಲಿ ಸೋಲು, 2015 ರಲ್ಲಿ ಫಲಿತಾಂಶವಿಲ್ಲ, 2016 ರಲ್ಲಿ ಗೆಲುವು, 2017 ರಲ್ಲಿ ಸೋಲು, 2018 ರಲ್ಲಿ ಸೋಲು, 2019 ರಲ್ಲಿ ಸೋಲು, 2020 ರಲ್ಲಿ ಸೋಲು, 2021 ರಲ್ಲಿ (ನೀಲಿ ಜೆರ್ಸಿ) ಸೋಲು, 2022 ರಲ್ಲಿ ಗೆಲುವು, 2023 ರಲ್ಲಿ ಗೆಲುವು. 2024 ರಲ್ಲಿ ಸೋಲು.



















