
2025 ರ ಏಷ್ಯಾಕಪ್ಗೆ ವೇದಿಕೆ ಸಜ್ಜಾಗಿದೆ. ಈ ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಏಷ್ಯಾಕಪ್ ಅನ್ನು ಟಿ 20 ಸ್ವರೂಪದಲ್ಲಿ ಆಡಲಾಗುತ್ತಿದ್ದು, ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.

ಹಾಲಿ ಚಾಂಪಿಯನ್ ಟೀಂ ಇಂಡಿಯಾ ಸೆಪ್ಟೆಂಬರ್ 10 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದು, ಆ ಬಳಿಕ ಸೆಪ್ಟೆಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಆದರೆ ಆ ಪಂದ್ಯಕ್ಕೂ ಮುನ್ನ ನಡೆಯಲಿರುವ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಏಷ್ಯಾಕಪ್‌ನಲ್ಲಿ ವಿಶೇಷ ದಾಖಲೆಯನ್ನು ನಿರ್ಮಿಸುವ ಹೊಸ್ತಿಲಿನಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯ ಇದುವರೆಗೆ ಟಿ20 ಏಷ್ಯಾಕಪ್‌ನಲ್ಲಿ 8 ಪಂದ್ಯಗಳನ್ನು ಆಡಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದರೆ, ಬ್ಯಾಟಿಂಗ್ನಲ್ಲಿಯೂ 83 ರನ್‌ಗಳ ಕಾಣಿಕೆ ನೀಡಿದ್ದಾರೆ.

ಇದೀಗ ಹಾರ್ದಿಕ್ ಪಾಂಡ್ಯ ಟಿ20 ಏಷ್ಯಾಕಪ್‌ನಲ್ಲಿ 100 ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 17 ರನ್‌ಗಳ ಅಗತ್ಯವಿದೆ. ಅವರು ಹೀಗೆ ಮಾಡಿದರೆ, ಟಿ20 ಏಷ್ಯಾಕಪ್‌ನಲ್ಲಿ 10 ಪ್ಲಸ್ ವಿಕೆಟ್‌ಗಳನ್ನು ಪಡೆದ ಮತ್ತು 100 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಇದಕ್ಕೂ ಮೊದಲು, ಯಾವುದೇ ಆಟಗಾರ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

ಇನ್ನು ಏಷ್ಯಾಕಪ್‌ನಲ್ಲಿ ಭಾರತದ ವೇಳಾಪಟ್ಟಿಯನ್ನು ನೋಡುವುದಾದರೆ.. ಯುಎಇ ವಿರುದ್ಧದ ಪಂದ್ಯದ ನಂತರ, ಟೀಂ ಇಂಡಿಯಾದ ಮುಂದಿನ ಪಂದ್ಯ ಸೆಪ್ಟೆಂಬರ್ 14 ರಂದು ಪಾಕಿಸ್ತಾನ ವಿರುದ್ಧ ನಡೆಯಲಿದೆ. ಸೆಪ್ಟೆಂಬರ್ 19 ರಂದು ಭಾರತ ತಂಡ ಓಮನ್ ವಿರುದ್ಧ ಆಡಲಿದೆ. ಎಲ್ಲಾ ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ.