WTC final: ಇನ್ನೊಂದು ಪಂದ್ಯ ಸೋತರೂ ಟೀಮ್ ಇಂಡಿಯಾದ WTC ಫೈನಲ್ ಕನಸು ಉಲ್ಟಾ ಪಲ್ಟಾ
WTC final 2025: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ ಪಂದ್ಯವು ಮುಂದಿನ ವರ್ಷ ಜೂನ್ 11 ರಿಂದ 15 ರವರಗೆ ನಡೆಯಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲಿದ್ದು, ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
Updated on: Dec 09, 2024 | 12:10 PM

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಸೋಲು ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಏಕೆಂದರೆ ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ WTC ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಮತ್ತೆ ಟಾಪ್-2 ಹಂತಕ್ಕೇರಲು ಉಳಿದ ಮೂರು ಪಂದ್ಯಗಳಲ್ಲಿ ಜಯಗಳಿಸಲೇಬೇಕು.

ಪ್ರಸ್ತುತ ಅಂಕ ಪಟ್ಟಿಯಲ್ಲಿ 60.710% ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾ ( 59.260%) ದ್ವಿತೀಯ ಸ್ಥಾನದಲ್ಲಿದೆ. ಇನ್ನು 57.290% ಹೊಂದಿರುವ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಈ ಮೂರನೇ ಸ್ಥಾನದಿಂದ ದ್ವಿತೀಯ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಭಾರತ ತಂಡ ಆಸ್ಟ್ರೇಲಿಯಾವನ್ನು ಎಲ್ಲಾ ಪಂದ್ಯಗಳಲ್ಲೂ ಸೋಲಿಸಬೇಕು.

ಈ ಮೂಲಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆದ್ದರೆ, ಟೀಮ್ ಇಂಡಿಯಾದ ಅಂಕ 64.04% ಆಗಲಿದೆ. ಇದರಿಂದ ದ್ವಿತೀಯ ಸ್ಥಾನವನ್ನು ಖಚಿತಪಡಿಸಿಕೊಂಡು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ನೇರ ಅರ್ಹತೆ ಪಡೆಯಬಹುದು.

ಅತ್ತ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಗೆದ್ದರೂ 60% ಅಂಕಗಳನ್ನು ಮಾತ್ರ ಪಡೆಯಲಿದೆ. ಅಂದರೆ ನೇರವಾಗಿ ಅರ್ಹತೆ ಪಡೆಯಲು ಟೀಮ್ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲೂ ಜಯಭೇರಿ ಬಾರಿಸಬೇಕು. ಇದರಿಂದ ಎರಡನೇ ಸ್ಥಾನದೊಂದಿಗೆ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಲಿದೆ.

ಇನ್ನು ಮುಂದಿನ 3 ಪಂದ್ಯಗಳಲ್ಲಿ 1 ಡ್ರಾ ಹಾಗೂ 2 ಜಯದೊಂದಿಗೆ ಟೀಮ್ ಇಂಡಿಯಾ 3-1 ಅಂತರದಿಂದ ಸರಣಿ ಗೆದ್ದರೆ, ಒಟ್ಟು 60.52% ಅಂಕಗಳನ್ನು ಪಡೆಯಲಿದೆ. ಅತ್ತ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ 2 ಪಂದ್ಯಗಳನ್ನು ಗೆದ್ದರೂ 57% ಅಂಕಗಳನ್ನು ಮಾತ್ರ ಗಳಿಸಲಿದೆ. ಅಂದರೆ ಇಲ್ಲಿ ಟೀಮ್ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲೂ ಒಂದೇ ಒಂದು ಸೋಲು ಕಾಣಬಾರದು. ಈ ಮೂಲಕ 3-1 ಅಂತರದಿಂದ ಸರಣಿ ಗೆದ್ದು ಫೈನಲ್ಗೆ ಅರ್ಹತೆ ಪಡೆಯಬಹುದು.

ಒಂದು ವೇಳೆ ಟೀಮ್ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲಿ ಒಂದು ಸೋಲನುಭವಿಸಿ ಸರಣಿಯನ್ನು 3-2 ಅಂತರದಿಂದ ಕೊನೆಗೊಳಿಸಿದರೆ, ಫೈನಲ್ ಅರ್ಹತೆಗಾಗಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಣ ಸರಣಿಯನ್ನು ಅವಲಂಭಿಸಬೇಕಾಗುತ್ತದೆ. ಅಂದರೆ ಇಲ್ಲಿ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂದು ಗೆಲುವು ಅಥವಾ ಒಂದು ಡ್ರಾ ಸಾಧಿಸಿದರೆ ಭಾರತ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು 2-2 ಅಂತರದಿಂದ ಕೊನೆಗೊಂಡರೆ, ಶ್ರೀಲಂಕಾ ವಿರುದ್ಧದ ಸರಣಿಯನ್ನು ಸೌತ್ ಆಫ್ರಿಕಾ 2-0 ಅಂತರದಿಂದ ಗೆಲ್ಲಬೇಕು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಒಂದು ಮ್ಯಾಚ್ನಲ್ಲಿ ಗೆಲ್ಲುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ.

ಇನ್ನು ಸೌತ್ ಆಫ್ರಿಕಾ ತಂಡವು ಶ್ರೀಲಂಕಾ ಹಾಗೂ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡರೆ 69.44% ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿ ಫೈನಲ್ಗೆ ಪ್ರವೇಶಿಸುವುದು ಖಚಿತ. ಹೀಗಾದಲ್ಲಿ ಟೀಮ್ ಇಂಡಿಯಾ ದ್ವಿತೀಯ ಸ್ಥಾನದೊಂದಿಗೆ ಫೈನಲ್ಗೆ ಅರ್ಹತೆ ಪಡೆಯುವುದನ್ನು ಎದುರು ನೋಡಬೇಕಾಗುತ್ತದೆ.
























