ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಸಿದ್ದತೆಗಳು ಶುರುವಾದ ಬೆನ್ನಲ್ಲೇ ಯಾವ ಫ್ರಾಂಚೈಸ್ ಯಾರನ್ನು ಖರೀದಿಸಲಿದೆ ಎಂಬ ಚರ್ಚೆಗಳು ಆರಂಭವಾಗಿದೆ. ಈಗಾಗಲೇ 8 ತಂಡಗಳು 27 ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಆರ್‌ಸಿಬಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರಿಟೈನ್ ಮಾಡಿಕೊಂಡಿದೆ.
ಆದರೆ ಆರ್‌ಸಿಬಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಂಡದ ಖಾಯಂ ಸದಸ್ಯರೆನಿಸಿಕೊಂಡಿದ್ದ ಯುಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್ ಅವರಂತಹ ಆಟಗಾರರಿದ್ದರು ಎಂಬುದು ವಿಶೇಷ. ಅದರಲ್ಲೂ ಕಳೆದ ಸೀಸನ್ನಲ್ಲಿನ ಪರ್ಪಲ್ ಕ್ಯಾಪ್ ವಿನ್ನರ್ ಹರ್ಷಲ್ ಪಟೇಲ್ ಅವರನ್ನು ರಿಲೀಸ್ ಮಾಡಿ ಆರ್‌ಸಿಬಿ ಅಚ್ಚರಿ ಮೂಡಿಸಿತ್ತು.
ಇದೀಗ ನಾನು ಮತ್ತೆ ಆರ್‌ಸಿಬಿ ಪರ ಆಡಲು ಬಯಸುತ್ತೇನೆ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ. ಅಂದರೆ ಆರ್‌ಸಿಬಿ ಮತ್ತೆ ತನ್ನನ್ನು ಖರೀದಿಸಬೇಕೆಂದು ಪರೋಕ್ಷವಾಗಿ ತಿಳಿಸಿದ್ದಾರೆ.
ನಾನು ಮತ್ತೊಮ್ಮೆ ಆರ್‌ಸಿಬಿ ತಂಡದ ಭಾಗವಾಗಲು ಬಯಸುತ್ತೇನೆ. ಆರ್‌ಸಿಬಿ ಫ್ರಾಂಚೈಸ್ ನನ್ನ ವೃತ್ತಿಜೀವನಕ್ಕೆ ಹೊಸ ದಿಕ್ಕನ್ನು ತೋರಿಸಿದೆ. . ಈ ತಂಡವು ನನ್ನನ್ನು ಅನುಭವಿ ಡೆತ್ ಬೌಲರ್ ಆಗಿ ರೂಪುಗೊಳ್ಳಲು ಸಹಾಯ ಮಾಡಿದೆ. ಹೀಗಾಗಿ ನಾನು ಮತ್ತೊಮ್ಮೆ RCBಯ ಕೆಂಪು ಜೆರ್ಸಿಯಲ್ಲಿ ಆಡಲು ಬಯಸುತ್ತೇನೆ. ಆರ್‌ಸಿಬಿ ಕೂಡ ನನ್ನ ಖರೀದಿಗಾಗಿ ಅತ್ಯುತ್ತಮ ಪ್ರಯತ್ನ ಮಾಡುವ ನಿರೀಕ್ಷೆಯಿದೆ ಎಂದು ಹರ್ಷಲ್ ಪಟೇಲ್ ತಿಳಿಸಿದ್ದಾರೆ.
ಐಪಿಎಲ್ನ ಈ ಹಿಂದಿನ ಸೀಸನ್ನ ಆರಂಭದಲ್ಲಿ ನಾನು ಡೆತ್ ಓವರ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಇದಾಗ್ಯೂ RCB ಫ್ರಾಂಚೈಸ್ ತನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ವರ್ಗಾವಣೆ ಮಾಡಿಕೊಂಡಿತ್ತು. ಅವರು ಬಹುಶಃ ನನ್ನಲ್ಲಿ ಉತ್ತಮ ಡೆತ್ ಬೌಲಿಂಗ್ನ ಸಾಮರ್ಥ್ಯವನ್ನು ಗಮನಿಸಿದ್ದಾರೆ. ಹೀಗಾಗಿ ನಾನು ಕೂಡ ಅದರತ್ತ ಹೆಚ್ಚಿನ ಗಮನಹರಿಸಿದೆ. ಅದು ಫಲ ನೀಡಿದ ಪರಿಣಾಮ 32 ವಿಕೆಟ್ ಪಡೆಯುವಂತಾಯಿತು ಎಂದು ಹರ್ಷಲ್ ಪಟೇಲ್ ಹರ್ಷ ವ್ಯಕ್ತಪಡಿಸಿದರು.