- Kannada News Photo gallery Cricket photos Super Smash T20: Michael Bracewell smokes record score in amazing Firebirds win
Super Smash T20: 11 ಸಿಕ್ಸ್, 11 ಫೋರ್: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ನ್ಯೂಜಿಲೆಂಡ್ ಆಟಗಾರ
Michael Bracewell: ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೇಸ್‌ವೆಲ್ 11 ಸಿಕ್ಸ್ ಹಾಗೂ 11 ಫೋರ್ಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಬ್ರೇಸ್‌ವೆಲ್ ಅಂತಿಮವಾಗಿ ಅಜೇಯರಾಗಿ ಉಳಿದರು.
Updated on: Jan 08, 2022 | 7:05 PM

ನ್ಯೂಜಿಲೆಂಡ್ನಲ್ಲಿರುವ ಸೂಪರ್ ಸ್ಮ್ಯಾಶ್ ಟಿ20 ಲೀಗ್ ರಣ ರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿದೆ. ಶನಿವಾರ ನಡೆದ ಲೀಗ್ ಪಂದ್ಯದಲ್ಲಿ ವೆಲ್ಲಿಂಗ್ಟನ್ ಫೈರ್ ಬರ್ಡ್ಸ್ ಮತ್ತು ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡದ ಪರ ಜೋಶ್ ಕ್ಲಾರ್ಕಸನ್ 38 ಎಸೆತಗಳಲ್ಲಿ 76 ರನ್ ಬಾರಿಸಿದ್ದರು. ಪರಿಣಾಮ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 227 ರನ್ಗಳಿಸಿತು.

ಈ 228 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವೆಲ್ಲಿಂಗ್ಟನ್ ತಂಡವು ಕೇವಲ 43 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಸೋಲು ಕಟ್ಟಿಟ್ಟ ಬುತ್ತಿ ಎಂಬಂತಿದ್ದ ಪಂದ್ಯದ ಚಿತ್ರಣ ಬದಲಿಸಿದ್ದು ನಾಯಕ ಮೈಕೆಲ್ ಬ್ರೇಸ್‌ವೆಲ್. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಬ್ರೇಸ್‌ವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೇಸ್‌ವೆಲ್ 11 ಸಿಕ್ಸ್ ಹಾಗೂ 11 ಫೋರ್ಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಬ್ರೇಸ್‌ವೆಲ್ ಅಂತಿಮವಾಗಿ ಅಜೇಯರಾಗಿ ಉಳಿದು ಕೇವಲ 65 ಎಸೆತಗಳಲ್ಲಿ ಅಜೇಯ 141 ರನ್ ಬಾರಿಸಿದರು. ಪರಿಣಾಮ ವೆಲ್ಲಿಂಗ್ಟನ್ ತಂಡವು 19.5 ಓವರ್ನಲ್ಲಿ 8 ವಿಕೆಟ್ 228 ರನ್ಗಳಿಸಿ 2 ವಿಕೆಟ್ಗಳ ರೋಚಕ ಜಯ ತನ್ನದಾಗಿಸಿಕೊಂಡಿತು.

ಇದರೊಂದಿಗೆ ಸೂಪರ್ ಸ್ಮ್ಯಾಶ್ ಲೀಗ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಕೂಡ ಮೈಕೆಲ್ ಬ್ರೇಸ್‌ವೆಲ್ ಪಾಲಾಯಿತು. ಈ ಹಿಂದೆ ಮಾರ್ಟಿನ್ ಗಪ್ಟಿಲ್ 120 ರನ್ ಬಾರಿಸಿರುವುದು ದಾಖಲೆಯಾಗಿತ್ತು. ಇದೀಗ 141 ರನ್ ಚಚ್ಚುವ ಮೂಲಕ ಸೂಪರ್ ಸ್ಮ್ಯಾಶ್ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್ಗಳಿಸಿದ ದಾಖಲೆಯನ್ನೂ ಕೂಡ ಮೈಕೆಲ್ ಬ್ರೇಸ್‌ವೆಲ್ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ 122 ರನ್ ಬಾರಿಸಿದ್ದು ದಾಖಲೆಯಾಗಿತ್ತು. ಇದೀಗ ಅಜೇಯ 141 ರನ್ ಬಾರಿಸಿ ಮೈಕೆಲ್ ಬ್ರೇಸ್‌ವೆಲ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.



















