- Kannada News Photo gallery Cricket photos ICC T20I World Cup 2024 Date to announce India T20 World Cup squad: See when
ICC T20I World Cup: ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟಿಸಲು ದಿನಾಂಕ ನಿಗದಿ: ಯಾವಾಗ ನೋಡಿ
India Squad for ICC T20I World Cup 2024: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಹತ್ತಿರವಾಗುತ್ತಿದೆ. ಇದೀಗ ಈ ಮಹತ್ವದ ಟೂರ್ನಿಗೆ ತಂಡವನ್ನು ಪ್ರಕಟಿಸಲು ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಇದೀಗ ಬಿಸಿಸಿಐ ಭಾರತೀಯ ತಂಡವನ್ನು ಯಾವಾಗ ಪ್ರಕಟಿಸಬಹುದು ಎಂಬ ಸುದ್ದಿ ಹೊರಬಿದ್ದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Mar 02, 2024 | 7:02 AM

ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2024 ಶುರುವಾಗಲಿದೆ. 11 ವರ್ಷಗಳ ನಂತರ ಐಸಿಸಿ ICC ಟ್ರೋಫಿಗಾಗಿ ಹುಡುಕಾಟ ನಡೆಸುತ್ತಿರುವ ಟೀಮ್ ಇಂಡಿಯಾ ಮೇಲೆ ಎಲ್ಲರ ಕಣ್ಣಿದೆ. ಈ ಈವೆಂಟ್ನಲ್ಲಿ ಭಾರತೀಯ ತಂಡದಲ್ಲಿ ಯಾವ ಆಟಗಾರರು ಸ್ಥಾನ ಪಡೆಯುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಇದೀಗ ಭಾರತೀಯ ತಂಡವನ್ನು ಯಾವಾಗ ಪ್ರಕಟಿಸಬಹುದು ಎಂಬ ಸುದ್ದಿ ಹೊರಬಿದ್ದಿದೆ. ಸ್ಪೋರ್ಟ್ಸ್ ಟಾಕ್‌ನ ವರದಿಯ ಪ್ರಕಾರ, ಭಾರತ ಸೇರಿದಂತೆ ಎಲ್ಲಾ ತಂಡಗಳಿಗೆ ಐಸಿಸಿ ಟಿ20 ವಿಶ್ವಕಪ್ಗೆ ತಮ್ಮ ಆಟಗಾರರನ್ನು ಘೋಷಣೆ ಮಾಡಲು ಮೇ 1 ಬುಧವಾರದ ವರೆಗೆ ಗಡುವು ನೀಡಲಾಗಿದೆ. ಇದರ ಜೊತೆಗೆ ಕೆಲ ನಿಯಮಗಳು ಕೂಡ ಇವೆ.

ಒಂದು ತಂಡವು ಪಂದ್ಯಾವಳಿಗೆ 15 ಆಟಗಾರರ ತಂಡವನ್ನು ಪ್ರಕಟಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಆದಾಗ್ಯೂ, ತಂಡಗಳು ಮೇ 25 ರೊಳಗೆ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಆದರೆ ಈ ಬದಲಾವಣೆಯನ್ನು ಐಸಿಸಿ ತಾಂತ್ರಿಕ ಸಮಿತಿಯು ಅನುಮೋದಿಸಬೇಕಾಗಿದೆ. ಇದರ ನಡುವೆ ಐಪಿಎಲ್ 2024 ರ ಫೈನಲ್ ಮೇ 27 ರಂದು ನಡೆಯಲಿದೆ ಎಂದು ಹೇಳಲಾಗಿದೆ.

ಐಸಿಸಿ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೇ 1 ರಂದು ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಬಿಸಿಸಿಐ ವಿಶ್ವಕಪ್ಗೆ ಆಟಗಾರರ ಆಯ್ಕೆಯನ್ನು ಐಪಿಎಲ್ ಪ್ರದರ್ಶನದ ಮೇಲೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕೊನೆಯ ಕ್ಷಣದವರೆಗೆ ಕಾದು ಮೇ 1 ರಂದು ಹೆಸರಿಸಬಹುದು.

ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಇನ್ನು ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಇತ್ತೀಚೆಗೆ ಬಿಸಿಸಿಐಯ ಕೇಂದ್ರ ಗುತ್ತಿಗೆ ಪಟ್ಟಿಯಿಂದ ತೆಗೆದುಹಾಕಲಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಇಬ್ಬರು ಸ್ಟಾರ್ ಬ್ಯಾಟರ್ಸ್ 2024 ರ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆ ಆಗುವುದು ಅನುಮಾನ ಎನ್ನಲಾಗಿದೆ.
