- Kannada News Photo gallery Cricket photos ICC Test Rankings Virat Kohli Drops Out Of Top 10 Rishabh Pant enterns top sixth position
ICC Test rankings: ರಿಷಬ್ ಪಂತ್ಗೆ ಭರ್ಜರಿ ಮುಂಬಡ್ತಿ; ಟಾಪ್ 10 ರಿಂದ ಹೊರಬಿದ್ದ ಕೊಹ್ಲಿ
ICC Test rankings: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದ ರಿಷಬ್ ಪಂತ್, ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದರೆ, ಕಳಪೆ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಟಾಪ್ 10 ರಿಂದ ಹೊರಬಿದ್ದಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ ಟಾಪ್ 10 ರಿಂದ ಹೊರಬೀಳುವ ಸನಿಹದಲ್ಲಿದ್ದಾರೆ.
Updated on:Sep 25, 2024 | 3:10 PM

ಐಸಿಸಿ, ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಆಟಗಾರರು ಭರ್ಜರಿ ಮುಂಬಡ್ತಿ ಪಡೆದಿದ್ದರೆ, ಕಳಪೆ ಪ್ರದರ್ಶನ ನೀಡಿದ ಕೆಲವರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

ಅದರಂತೆ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದ ರಿಷಬ್ ಪಂತ್, ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದರೆ, ಕಳಪೆ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಟಾಪ್ 10 ರಿಂದ ಹೊರಬಿದ್ದಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ ಟಾಪ್ 10 ರಿಂದ ಹೊರಬೀಳುವ ಸನಿಹದಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 56 ರನ್ ಹಾಗೂ 10 ರನ್ ಬಾರಿಸಿದ್ದ ಜೈಸ್ವಾಲ್ 751 ರೇಟಿಂಗ್ ಪಾಯಿಂಟ್‌ಗಳ ಜೊತೆಗೆ ಐದನೇ ಸ್ಥಾನಕ್ಕೇರಿದ್ದಾರೆ. ಈ ಟೆಸ್ಟ್ ಪಂದ್ಯಕ್ಕೂ ಮುನ್ನ 6ನೇ ಸ್ಥಾನದಲ್ಲಿದ್ದ ಜೈಸ್ವಾಲ್ ಇದೀಗ ಒಂದು ಸ್ಥಾನ ಮೇಲೇರಿದ್ದಾರೆ.

ಹಾಗೆಯೇ ಚೆನ್ನೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿ 39 ರನ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 109 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ದ ರಿಷಬ್ ಪಂತ್ 731 ರೇಟಿಂಗ್‌ನೊಂದಿಗೆ 6ನೇ ಸ್ಥಾನಕ್ಕೇರಿದ್ದಾರೆ. ಬರೋಬ್ಬರಿ ಒಂದುವರೆ ವರ್ಷದ ಬಳಿಕ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಪಂತ್, ಟಾಪ್ 10ರೊಳಗೆ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರಂಭಿಕ ಶುಭ್ಮನ್ ಗಿಲ್ ಕೂಡ ಭರ್ಜರಿ ಮುಂಬಡ್ತಿ ಪಡೆದಿದ್ದು, ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್ನಲ್ಲಿ ಬಾರಿಸಿದ ಅಮೋಘ ಶತಕದ ಫಲವಾಗಿ 5 ಸ್ಥಾನ ಮೇಲೇರಿದ್ದು, 19ನೇ ಸ್ಥಾನದಿಂದ ಇದೀಗ 14ನೇ ಸ್ಥಾನಕ್ಕೆ ಬಂದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯದೆ ಔಟಾಗಿದ್ದ ಗಿಲ್, ಎರಡನೇ ಇನ್ನಿಂಗ್ಸ್ನಲ್ಲಿ 119 ರನ್ಗಳ ಇನ್ನಿಂಗ್ಸ್ ಕಟ್ಟಿದ್ದರು.

ಉಳಿದಂತೆ ಈ ಮೊದಲು 5ನೇ ಸ್ಥಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 5 ಸ್ಥಾನ ಕಳೆದುಕೊಂಡಿದ್ದು, ಇದೀಗ 10ನೇ ಸ್ಥಾನಕ್ಕೆ ಜಾರಿದ್ದಾರೆ. ಬಾಂಗ್ಲಾದೇಶ ವಿರುದ್ಧ ಆಡಿದ ಎರಡೂ ಇನ್ನಿಂಗ್ಸ್ಗಳಲ್ಲಿ ಕೇವಲ 11 ರನ್ ಬಾರಿಸಿದ್ದ ರೋಹಿತ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರಿ ನಷ್ಟ ಅನುಭವಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಕೂಡ ಇದೀಗ ಟಾಪ್ 10 ರಿಂದ ಹೊರಬಿದ್ದಿದ್ದು, 12ನೇ ಸ್ಥಾನದಲ್ಲಿದ್ದಾರೆ.

ಇನ್ನು ಐಸಿಸಿ ಟೆಸ್ಟ್ ಶ್ರೇಯಾಂಕದ ಅಗ್ರ-4ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಜೋ ರೂಟ್ 899 ರೇಟಿಂಗ್‌ನೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 852 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ 760 ರೇಟಿಂಗ್ ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನದಲ್ಲಿ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 757 ರೇಟಿಂಗ್ ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
Published On - 2:15 pm, Wed, 25 September 24
