- Kannada News Photo gallery Cricket photos R Ashwin and Jasprit Bumrah top 2 position in ICC bowling test rankings
ICC Test rankings: ಬೌಲರ್ಗಳ ಶ್ರೇಯಾಂಕದಲ್ಲಿ ಭಾರತೀಯರದ್ದೇ ಪಾರುಪತ್ಯ
ICC Test rankings: ಚೆನ್ನೈ ಟೆಸ್ಟ್ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮೂಲಕ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿದಿದ್ದ ಆರ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಐಸಿಸಿ ರ್ಯಾಂಕಿಂಗ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದರೆ, ರವೀಂದ್ರ ಜಡೇಜಾ ಕೂಡ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಬೌಲರ್ಗಳ ರ್ಯಾಂಕಿಂಗ್‌ನಲ್ಲಿ ಮಾತ್ರವಲ್ಲದೆ ಆಲ್ರೌಂಡರ್ಗಳ ಪಟ್ಟಿಯಲ್ಲೂ ಕಮಾಲ್ ಮಾಡಿದ್ದಾರೆ.
Updated on: Sep 25, 2024 | 6:42 PM

ಪ್ರಸ್ತುತ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ, ಬಾಂಗ್ಲಾದೇಶಕ್ಕೆ ಆತಿಥ್ಯವಹಿಸುತ್ತಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 280 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿತ್ತು.

ಇದೀಗ ಈ ಪ್ರದರ್ಶನದ ಫಲವನ್ನು ಟೀಂ ಇಂಡಿಯಾದ ಆಟಗಾರರು ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅನುಭವಿಸಿದ್ದಾರೆ. ಐಸಿಸಿ ಇಂದು ಪ್ರಕಟಿಸಿದ ಟೆಸ್ಟ್ ಬೌಲರ್ಗಳ ಶ್ರೇಯಾಂಕದಲ್ಲಿ ಭಾರತೀಯ ವೇಗಿಗಳದ್ದೇ ಪಾರುಪತ್ಯ ಕಂಡುಬಂದಿದೆ. ಅದರಂತೆ ಅಗ್ರ 10 ರೊಳಗೆ ಭಾರತದ ಮೂವರು ಬೌಲರ್ಗಳು ಸ್ಥಾನ ಪಡೆದಿದ್ದಾರೆ.

ಚೆನ್ನೈ ಟೆಸ್ಟ್ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮೂಲಕ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿದಿದ್ದ ಆರ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಐಸಿಸಿ ರ್ಯಾಂಕಿಂಗ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದರೆ, ರವೀಂದ್ರ ಜಡೇಜಾ ಕೂಡ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಬೌಲರ್ಗಳ ರ್ಯಾಂಕಿಂಗ್‌ನಲ್ಲಿ ಮಾತ್ರವಲ್ಲದೆ ಆಲ್ರೌಂಡರ್ಗಳ ಪಟ್ಟಿಯಲ್ಲೂ ಕಮಾಲ್ ಮಾಡಿದ್ದಾರೆ.

ಐಸಿಸಿ ನೂತನ ಟೆಸ್ಟ್ ಬೌಲಿಂಗ್ ಶ್ರೇಯಾಂಕದ ಪ್ರಕಾರ, 871 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಆರ್ ಅಶ್ವಿನ್ ನಂಬರ್ 1 ಸ್ಥಾನದಲ್ಲಿದ್ದರೆ, 854 ಅಂಕಗಳನ್ನು ಹೊಂದಿರುವ ಜಸ್ಪ್ರೀತ್ ಬುಮ್ರಾ 2 ನೇ ಸ್ಥಾನದಲ್ಲಿದ್ದಾರೆ. ಅಂದರೆ ಬೌಲರ್ಗಳ ಶ್ರೇಯಾಂಕದ ಮೊದಲೆರಡು ಸ್ಥಾನಗಳಲ್ಲಿ ಭಾರತೀಯರೇ ಇದ್ದಾರೆ.

ಹಾಗೆಯೇ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಅಗ್ರ 10 ರೊಳಗೆ ಸ್ಥಾನ ಪಡೆದಿದ್ದು, 804 ರೇಟಿಂಗ್‌ನೊಂದಿಗೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ.

ಉಳಿದಂತೆ 847 ಅಂಕಗಳನ್ನು ಹೊಂದಿರುವ ಜೋಶ್ ಹ್ಯಾಜಲ್‌ವುಡ್ 3ನೇ ಸ್ಥಾನದಲ್ಲಿದ್ದರೆ, ಪ್ಯಾಟ್ ಕಮಿನ್ಸ್ 847 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಗಿಸೊ ರಬಾಡ 820 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ ಮತ್ತೊಬ್ಬ ಆಸೀಸ್ ಬೌಲರ್ ನಾಥನ್ ಲಿಯಾನ್ 7ನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾದ ಪ್ರಭಾತ್ ಜಯಸೂರ್ಯ 743 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ನ ಕೈಲ್ ಜೇಮಿಸನ್ 721 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. ಇದಲ್ಲದೇ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ 709 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

ಇನ್ನು ಐಸಿಸಿ ಆಲ್‌ರೌಂಡರ್ ಶ್ರೇಯಾಂಕದಲ್ಲಿಯೂ ಭಾರತೀಯರದ್ದೇ ಮೇಲುಗೈ ಆಗಿದ್ದು, ಆಲ್‌ರೌಂಡರ್ ರವೀಂದ್ರ ಜಡೇಜಾ 475 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇವಲ್ಲದೇ ಆರ್ ಅಶ್ವಿನ್ ಕೂಡ 370 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ 291 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಜೋ ರೂಟ್ 282 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ 270 ಅಂಕಗಳನ್ನು ಹೊಂದಿದ್ದಾರೆ.
