- Kannada News Photo gallery Cricket photos IPL 2025: Michael Vaughan’s IPL ‘Play, Sell or Bench’ Picks
Virat Kohli: ವಿರಾಟ್ ಕೊಹ್ಲಿ ಕಪ್ ಗೆದ್ದಿಲ್ಲ… ಹೀಗಾಗಿ ಮಾರಾಟ ಮಾಡ್ತೀನಿ ಎಂದ ವಾನ್
ವಿರಾಟ್ ಕೊಹ್ಲಿ IPL ನಲ್ಲಿ ಈವರೆಗೆ 17 ಸೀಸನ್ ಆಡಿದ್ದಾರೆ. RCB ಪರ ಮಾತ್ರ ಕಣಕ್ಕಿಳಿದಿರುವ ಅವರು ಒಮ್ಮೆಯೂ ಟ್ರೋಫಿ ಎತ್ತಿ ಹಿಡಿದಿಲ್ಲ. 2009, 2011 ಮತ್ತು 2016 ರಲ್ಲಿ ಆರ್ಸಿಬಿ ತಂಡ ಫೈನಲ್ಗೆ ಪ್ರವೇಶಿಸಿದರೂ ನಿರ್ಣಾಯಕ ಪಂದ್ಯದಲ್ಲಿ ಮುಗ್ಗರಿಸಿತ್ತು. ಇದೀಗ 18ನೇ ಸೀಸನ್ಗಾಗಿ ಸಿದ್ಧತೆಯಲ್ಲಿರುವ ಆರ್ಸಿಬಿ ಮುಂದಿನ ವರ್ಷ ಹೊಸ ಅಧ್ಯಾಯ ಬರೆಯಲಿದ್ದಾರಾ ಕಾದು ನೋಡಬೇಕಿದೆ.
Updated on: Sep 25, 2024 | 2:30 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 18ನೇ ಆವೃತ್ತಿ ಆರಂಭಕ್ಕೆ ಇನ್ನೂ ಹಲವು ತಿಂಗಳುಗಳಿವೆ. ಇದಾಗ್ಯೂ ಮೆಗಾ ಹರಾಜಿನ ಕಾರಣದಿಂದ ಐಪಿಎಲ್ 2025 ಸಖತ್ ಸುದ್ದಿಯಲ್ಲಿದೆ. ಈ ಚರ್ಚೆಗಳ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ತಾನು ಆಡಿಸುವ, ಬೆಂಚ್ನಲ್ಲಿ ಕೂರಿಸುವ ಮತ್ತು ಮಾರಾಟ ಮಾಡುವ ಆಟಗಾರರನ್ನು ಹೆಸರಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಅವರ ಪೋಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ವಾನ್ಗೆ ಐಪಿಎಲ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲೂ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ... ಈ ಮೂವರಲ್ಲಿ ಯಾರನ್ನು ಆಡಿಸುತ್ತೀರಿ, ಯಾರನ್ನು ಬೆಂಚ್ನಲ್ಲಿ ಕೂರಿಸುತ್ತೀರಿ ಮತ್ತು ಯಾರನ್ನು ಮಾರಾಟ ಮಾಡುತ್ತೀರಿ ಎಂದು ಪ್ರಶ್ನಿಸಲಾಗಿತ್ತು.

ಈ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಮೈಕಲ್ ವಾನ್, ನಾನು ಮಹೇಂದ್ರ ಸಿಂಗ್ ಧೋನಿಯನ್ನು ಆಡಿಸುತ್ತೇನೆ. ಅವರಿಗಿಂತ ಉತ್ತಮ ಆಟಗಾರ ಬೇರೊಬ್ಬರಿಲ್ಲ ಎಂದು ಭಾವಿಸುತ್ತೇನೆ. ಅಲ್ಲದೆ ಅತ್ಯುತ್ತಮ ನಾಯಕ ಕೂಡ. ಹೀಗಾಗಿ ನಾನು ಧೋನಿಯನ್ನು ಕಣಕ್ಕಿಳಿಸುತ್ತೇನೆ ಎಂದಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯನ್ನು ಆಡಿಸಿದರೆ, ರೋಹಿತ್ ಶರ್ಮಾ ಅವರನ್ನು ಬೆಂಚ್ನಲ್ಲಿ ಕೂರಿಸುತ್ತೇನೆ. ಇಲ್ಲಿ ಧೋನಿಯ ಬದಲಿ ಆಯ್ಕೆಯಾಗಿ ನಾನು ರೋಹಿತ್ ಶರ್ಮಾ ಅವರನ್ನು ಬಳಸಿಕೊಳ್ಳುತ್ತೇನೆ ಎಂದು ಮೈಕಲ್ ವಾನ್ ಹೇಳಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ 6 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ ಹಿಟ್ಮ್ಯಾನ್ ನನ್ನ ಎರಡನೇ ಆಯ್ಕೆ ಎಂದಿದ್ದಾರೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಮಾರಾಟ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಏಕೆಂದರೆ ಕೊಹ್ಲಿಯು ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಮಾರಾಟ ಮಾಡಿ ಉತ್ತಮ ಮೊತ್ತವನ್ನು ಪಡೆಯಲು ಬಯಸುತ್ತೇನೆ ಎಂದು ಮೈಕಲ್ ವಾನ್ ಹೇಳಿದ್ದಾರೆ.
