Ben Stokes: 2 ಬಾರಿ ನಿವೃತ್ತಿ ಘೋಷಿಸಿ 3ನೇ ಬಾರಿ ಕಣಕ್ಕಿಳಿಯುವ ಸೂಚನೆ ನೀಡಿದ ಬೆನ್ ಸ್ಟೋಕ್ಸ್..!
Ben Stokes: ಇಂಗ್ಲೆಂಡ್ ಪರ 114 ಏಕದಿನ ಪಂದ್ಯಗಳನ್ನಾಡಿರುವ ಬೆನ್ ಸ್ಟೋಕ್ಸ್ ಇದುವರೆಗೆ 3463 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 5 ಶತಕ ಹಾಗೂ 24 ಅರ್ಧಶತಕಗಳು ಮೂಡಿಬಂದಿವೆ. ಹಾಗೆಯೇ 88 ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 74 ವಿಕೆಟ್ಗಳನ್ನು ಕಬಳಿಸಿದ್ದಾರೆ.
Updated on: Sep 25, 2024 | 11:04 AM

ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಮತ್ತೆ ಏಕದಿನ ಕ್ರಿಕೆಟ್ ಮರಳುವ ಸೂಚನೆ ನೀಡಿದ್ದಾರೆ. ಅದು ಸಹ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಂ ಸಾರಥ್ಯದಲ್ಲಿ ಎಂಬುದು ವಿಶೇಷ. 2025ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮೆಕಲಂ ಇಂಗ್ಲೆಂಡ್ ಏಕದಿನ ತಂಡದ ಹೆಡ್ ಕೋಚ್ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಅತ್ತ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಂ ಏಕದಿನ ಮತ್ತು ಟಿ20 ತಂಡಗಳ ತರಬೇತುದಾರನಾಗಿ ಆಯ್ಕೆಯಾಗುತ್ತಿದ್ದಂತೆ, ಇತ್ತ ಬೆನ್ ಸ್ಟೋಕ್ಸ್ ನಿವೃತ್ತಿ ಹಿಂಪಡೆದು ಮತ್ತೆ ಏಕದಿನ ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ.

ವಿಶೇಷ ಎಂದರೆ ಬೆನ್ ಸ್ಟೋಕ್ಸ್ 2022 ರಲ್ಲಿ ಒನ್ಡೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ 2023ರ ಏಕದಿನ ವಿಶ್ವಕಪ್ಗಾಗಿ ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೆ ಕಣಕ್ಕಿಳಿದಿದ್ದರು. ಏಕದಿನ ವಿಶ್ವಕಪ್ ಬೆನ್ನಲ್ಲೇ ನಿವೃತ್ತರಾಗಿದ್ದ ಬೆನ್ ಸ್ಟೋಕ್ಸ್ ಇದೀಗ ಮತ್ತೆ ಒನ್ ಡೇ ಕ್ರಿಕೆಟ್ನಲ್ಲಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬೆನ್ ಸ್ಟೋಕ್ಸ್, ವೈಟ್ ಬಾಲ್ ಕ್ರಿಕೆಟ್ನಲ್ಲಿ ಮುಂದುವರೆಯಲು ನನಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಾನು ಮತ್ತೆ ಕಣಕ್ಕಿಳಿಯುತ್ತೇನೆ. ಕೋಚ್ ಬ್ರೆಂಡನ್ ಮೆಕಲಂ ಕರೆ ಮಾಡಿ ಆಡುವಂತೆ ಕೇಳಿಕೊಂಡರೆ ನಾನು ನೋ ಅನ್ನುವುದಿಲ್ಲ. ಅಲ್ಲದೆ ಅವರ ಗರಡಿಯಲ್ಲಿ ಇಂಗ್ಲೆಂಡ್ ಪರ ಮತ್ತೆ ಏಕದಿನ ಕ್ರಿಕೆಟ್ ಆಡಲು ಎಸ್ ಅನ್ನುತ್ತೇನೆ ಎಂದು ತಿಳಿಸಿದ್ದಾರೆ.

ಈ ಮೂಲಕ ನಿವೃತ್ತಿಯಿಂದ ಹೊರಬರಲು ಮನಸ್ಸು ಮಾಡಿರುವುದನ್ನು ಬೆನ್ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ. ಇದೀಗ ಸ್ಟೋಕ್ಸ್ ಅವರ ಏಕದಿನ ಕ್ರಿಕೆಟ್ ಭವಿಷ್ಯ ನೂತನ ಕೋಚ್ ಮೆಕಲಂ ಕೈಯಲ್ಲಿದೆ. ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಬೆನ್ ಸ್ಟೋಕ್ಸ್ ಜೊತೆಗೂಡಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಬ್ರೆಂಡನ್ ಮೆಕಲಂ, ಸ್ಟಾರ್ ಆಲ್ರೌಂಡರ್ಗೆ ಮತ್ತೆ ಬುಲಾವ್ ನೀಡುವ ಸಾಧ್ಯತೆಯಿದೆ. ಅದರಂತೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆನ್ ಸ್ಟೋಕ್ಸ್ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.



















