ಗೆದ್ದ ಇಂಗ್ಲೆಂಡ್ 7ನೇ ಸ್ಥಾನದಲ್ಲಿ… ಸೋತ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ!
WTC Points Table 2025: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯ ಮುಗಿದಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ನೂತನ ಅಂಕ ಪಟ್ಟಿ ಬಿಡುಗಡೆಯಾಗಿದೆ. ಈ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ.
Updated on: Dec 27, 2025 | 1:54 PM

ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನ ಹೊರತಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಈ ಹಿಂದೆಯಿದ್ದ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಅತ್ತ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅದರಂತೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ನೂತನ ಅಂಕ ಪಟ್ಟಿ ಈ ಕೆಳಗಿನಂತಿದೆ...

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ನೂತನ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ. ಆಸೀಸ್ ಪಡೆ ಈವರೆಗೆ 7 ಪಂದ್ಯಗಳನ್ನು ಆಡಿದ್ದು, ಈ ವೇಳೆ 6 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯದಲ್ಲಿ ಸೋತಿರುವ ಆಸ್ಟ್ರೇಲಿಯಾ ಇದೀಗ 85.710 ಶೇಕಡಾವಾರು ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕಿವೀಸ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಆಡಿದ 3 ಮ್ಯಾಚ್ಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾನೊಂದಿಗೆ 77.780 ಶೇಕಡಾವಾರು ಹೊಂದಿದೆ. ಈ ಮೂಲಕ WTC ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆ.

ಟೀಮ್ ಇಂಡಿಯಾವನ್ನು 2-0 ಅಂತರದಿಂದ ಸೋಲಿಸಿರುವ ಸೌತ್ ಆಫ್ರಿಕಾ ತಂಡ ಮೂರನೇ ಸ್ಥಾನದಲ್ಲಿದೆ. ಆಫ್ರಿಕಾ ಪಡೆ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ನಾಲ್ಕು ಮ್ಯಾಚ್ಗಳಲ್ಲಿ 3 ಜಯ ಸಾಧಿಸಿದೆ. ಈ ಮೂಲಕ 75 ಶೇಕಡಾವಾರಿನೊಂದಿಗೆ ಸೌತ್ ಆಫ್ರಿಕಾ ತಂಡ ತೃತೀಯ ಸ್ಥಾನವನ್ನು ಅಲಂಕರಿಸಿದೆ.

ಹಾಗೆಯೇ ಶ್ರೀಲಂಕಾ ತಂಡ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಲಂಕಾ ಪಡೆ ಕೂಡ ಈವರೆಗೆ 2 ಪಂದ್ಯಗಳನ್ನು ಮಾತ್ರ ಆಡಿದ್ದು, ಈ ಮ್ಯಾಚ್ಗಳಲ್ಲಿ ಒಂದು ಜಯ ಹಾಗೂ ಒಂದು ಡ್ರಾನೊಂದಿಗೆ 66.67 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ಪಾಕಿಸ್ತಾನ್ ತಂಡ ಕಾಣಿಸಿಕೊಂಡಿದೆ. ಪಾಕ್ ಪಡೆ ಆಡಿರುವ 2 ಮ್ಯಾಚ್ಗಳಲ್ಲಿ ಒಂದು ಜಯ ಹಾಗೂ ಒಂದು ಸೋಲಿನೊಂದಿಗೆ 50 ಶೇಕಡಾವಾರು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಇನ್ನು ಟೀಮ್ ಇಂಡಿಯಾ ಈವರೆಗೆ 9 ಪಂದ್ಯಗಳಲ್ಲಿ 4 ಗೆಲುವು ಮತ್ತು ಒಂದು ಡ್ರಾ ಸಾಧಿಸಿದೆ. ಇನ್ನುಳಿದ 4 ಮ್ಯಾಚ್ಗಳಲ್ಲೂ ಹೀನಾಯ ಸೋಲನುಭವಿಸಿದೆ. ಈ ಸೋಲು-ಗೆಲುವುಗಳೊಂದಿಗೆ 48.150 ಶೇಕಡಾವಾರು ಅಂಕ ಪಡೆದಿರುವ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಇದೀಗ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಇಂಗ್ಲೆಂಡ್ ತಂಡವು ನೂತನ ಪಾಯಿಂಟ್ಸ್ ಟೇಬಲ್ನಲ್ಲೂ 7ನೇ ಸ್ಥಾನದಲ್ಲೇ ಕಾಣಿಸಿಕೊಂಡಿದೆ. ಇದಾಗ್ಯೂ ಕಳೆದ ಬಾರಿಗಿಂತ ಶೇಕಡಾವಾರು ಅಂಕದಲ್ಲಿ ಏರಿಕೆಯಾಗಿದ್ದು, ಒಟ್ಟು 35.190 ಶೇಕಡಾವಾರು ಪಾಯಿಂಟ್ಸ್ನೊಂದಿಗೆ ಏಳನೇ ಸ್ಥಾನ ಅಲಂಕರಿಸಿದೆ. ಇನ್ನು ಬಾಂಗ್ಲಾದೇಶ್ ತಂಡವು 16.67 ಶೇಕಡಾವಾರು ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದರೆ, 7 ಪಂದ್ಯಗಳನ್ನಾಡಿದ 7 ಸೋಲನುಭವಿಸಿರುವ ವೆಸ್ಟ್ ಇಂಡೀಸ್ ತಂಡ 4.170 ಶೇಕಡಾವಾರು ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
