Updated on: Mar 18, 2023 | 11:54 AM
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ, ಬೌಲಿಂಗ್ನಲ್ಲಿ ಕೇವಲ ಒಂದು ವಿಕೆಟ್ ಪಡೆಯುವ ಮೂಲಕ 9 ವರ್ಷಗಳ ಬರವನ್ನು ಕೊನೆಗೊಳಿಸಿದ್ದಾರೆ.
ವಾಸ್ತವವಾಗಿ, ಹಾರ್ದಿಕ್ ಪಾಂಡ್ಯ ಉರುಳಿಸಿದ ಆ ಒಂದು ವಿಕೆಟ್ ವಿಶೇಷವೇನೆಂದರೆ, 9 ವರ್ಷಗಳ ನಂತರ, ಟೀಂ ಇಂಡಿಯಾದ ನಾಯಕನೊಬ್ಬ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಪಡೆದಿದ್ದಾರೆ.
ಈ ಹಿಂದೆ 2014ರಲ್ಲಿ ಸುರೇಶ್ ರೈನಾ ಈ ಕೆಲಸ ಮಾಡಿದ್ದರು. ಈ ನಡುವೆ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದ ನಾಯಕತ್ವವಹಿಸಿದರಾದರೂ, ಇವರ್ಯಾರು ಬೌಲಿಂಗ್ ಮಾಡಿ ವಿಕೆಟ್ ಪಡೆದಿರಲಿಲ್ಲ.
ಈಗ ರೋಹಿತ್ ಬದಲಿಗೆ ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗುವ ಅವಕಾಶ ಪಡೆದುಕೊಂಡಿದ್ದ ಪಾಂಡ್ಯ, 13ನೇ ಓವರ್ನಲ್ಲಿ ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ ಈ ಬರವನ್ನು ಕೊನೆಗೊಳಿಸಿದ್ದಾರೆ.
ವಾಸ್ತವವಾಗಿ ಸ್ಮಿತ್ ಅವರ ಈ ವಿಕೆಟ್ ಬಹಳ ಮುಖ್ಯವಾಗಿತ್ತು. ಏಕೆಂದರೆ ಸ್ಮಿತ್ ಮತ್ತು ಮಾರ್ಷ್ 72 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು. ಅಲ್ಲದೆ ಈ ಇಬ್ಬರ ಜೊತೆಯಾಟ ಆಸ್ಟ್ರೇಲಿಯಾ ಬಿಗ್ ಟಾರ್ಗೆಟ್ ಸೆಟ್ ಮಾಡುವ ಸೂಚನೆಯನ್ನೂ ನೀಡಿತ್ತು.
ಬಾಲ್ ಮಾತ್ರವಲ್ಲದೆ ಬ್ಯಾಟ್‌ನಲ್ಲೂ ಉತ್ತಮ ಕೊಡುಗೆ ನೀಡಿದ ಪಾಂಡ್ಯ, ಕಠಿಣ ಪಿಚ್‌ನಲ್ಲಿ 31 ಎಸೆತಗಳಲ್ಲಿ 25 ರನ್ ಬಾರಿಸಿದರು. ಪಾಂಡ್ಯ ಅವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಸೇರಿತ್ತು. ಅಲ್ಪ ಮೊತ್ತದ ಈ ಪಂದ್ಯದಲ್ಲಿ ಪಾಂಡ್ಯ ಕೊಡುಗೆ ಪ್ರಮುಖವಾಗಿತ್ತು.