ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸತತ ಮೂರನೇ ಟೆಸ್ಟ್ ಶತಕ ಗಳಿಸುವ ಮೂಲಕ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಕಿಂಗ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್ ತಂಡ ವಿಲಿಯಮ್ಸನ್ ಅವರ ಶತಕದ ಆಧಾರದಲ್ಲಿ ದೊಡ್ಡ ಮೊತ್ತದತ್ತ ಸಾಗಿದೆ. 76ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೇನ್, 171 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 28ನೇ ಶತಕ ಬಾರಿಸಿದರು. ಇದರೊಂದಿಗೆ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದರು.
ಈ ಶತಕದೊಂದಿಗೆ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದ್ದಾರೆ. ಅಲ್ಲದೆ ಅತಿ ವೇಗವಾಗಿ 28 ಟೆಸ್ಟ್ ಶತಕಗಳನ್ನು ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನೂ ಕೇನ್ ಮಾಡಿದ್ದಾರೆ. ವಾಸ್ತವವಾಗಿ ಕೇನ್, 164 ಇನ್ನಿಂಗ್ಸ್‌ಗಳಲ್ಲಿ 28 ಶತಕ ಸಿಡಿಸಿದ ಸಾಧನೆ ಮಾಡಿದ್ದರೆ, ಕೊಹ್ಲಿ 183 ಇನ್ನಿಂಗ್ಸ್‌ಗಳಲ್ಲಿ 28 ಟೆಸ್ಟ್ ಶತಕಗಳನ್ನು ಪೂರೈಸಿದ್ದಾರೆ.
ಫ್ಯಾಬ್ 4ರಲ್ಲಿ ಅತಿ ವೇಗವಾಗಿ 28 ಶತಕಗಳನ್ನು ಬಾರಿಸಿದ ದಾಖಲೆ ಸ್ಟೀವ್ ಸ್ಮಿತ್ ಹೆಸರಿನಲ್ಲಿದೆ. ಕೇವಲ 153 ಇನ್ನಿಂಗ್ಸ್‌ಗಳಲ್ಲಿ ಸ್ಮಿತ್ ಈ ಸಾಧನೆ ಮಾಡಿದ್ದಾರೆ.
ಅಲ್ಲದೆ ಸಿಕ್ಸರ್ಗಳ ವಿಚಾರದಲ್ಲೂ ಅಪರೂಪದ ದಾಖಲೆ ಬರೆದ ವಿಲಿಯಮ್ಸನ್ ಈ ಇನ್ನಿಂಗ್ಸ್‌ನಲ್ಲಿ 2 ಎಸೆತಗಳಲ್ಲಿ 2 ಸತತ ಸಿಕ್ಸರ್‌ಗಳನ್ನು ಬಾರಿಸಿದರು. ಇದಕ್ಕೂ ಮುನ್ನ ಅವರು 15616 ಎಸೆತಗಳಲ್ಲಿ 19 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದರರ್ಥ ಕೇನ್, ಪ್ರತಿ 822 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ.
ಸದ್ಯಕ್ಕೆ ಅದ್ಭುತ ಫಾರ್ಮ್‌ನಲ್ಲಿರುವ ವಿಲಿಯಮ್ಸನ್ ಈ ಶತಕದ ಮೊದಲು, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಅಜೇಯ 121 ರನ್ ಬಾರಿಸಿದ್ದರು. ಅಲ್ಲದೆ ಅದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧವೂ 132 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದರೊಂದಿಗೆ ಸತತ 3 ಶತಕಗಳನ್ನು ಒಂದಕ್ಕಿಂತ ಹೆಚ್ಚು ಬಾರಿನ ಸಿಡಿಸಿದ ನ್ಯೂಜಿಲೆಂಡ್ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Published On - 11:02 am, Sat, 18 March 23