- Kannada News Photo gallery Cricket photos IND vs ENG 3rd test Jasprit Bumrah Likely Rested for 3rd rajkot test says report
IND vs ENG: ಮೂರನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ‘ಔಟ್’..! ವರದಿ
Jasprit Bumrah: ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 9 ವಿಕೆಟ್ ಪಡೆದು ಟೀಂ ಇಂಡಿಯಾದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡಿರುವ ತಂಡದ ಉಪನಾಯಕ ವೇಗಿ ಜಸ್ಪ್ರೀತ್ ಬುಮ್ರಾಗೆ ಮೂರನೇ ಟೆಸ್ಟ್‌ನಿಂದ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
Updated on: Feb 05, 2024 | 8:32 PM

ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 9 ವಿಕೆಟ್ ಪಡೆದು ಟೀಂ ಇಂಡಿಯಾದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡಿರುವ ತಂಡದ ಉಪನಾಯಕ ವೇಗಿ ಜಸ್ಪ್ರೀತ್ ಬುಮ್ರಾಗೆ ಮೂರನೇ ಟೆಸ್ಟ್‌ನಿಂದ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾದ ವಿಶಾಖಪಟ್ಟಣಂ ಪಿಚ್‌ನಲ್ಲೂ ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ಗರಿಷ್ಠ 6 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದಿದ್ದರು. ನಂತರ ಪಂದ್ಯದ ನಾಲ್ಕನೇ ದಿನವೂ ಮ್ಯಾಜಿಕ್ ಮಾಡಿದ ಬುಮ್ರಾ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇಂಗ್ಲೆಂಡ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಜಾನಿ ಬೈರ್‌ಸ್ಟೋವ್ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಇಂಗ್ಲೆಂಡ್‌ನ ಗೆಲುವಿನ ಭರವಸೆಗೆ ದೊಡ್ಡ ಪೆಟ್ಟು ನೀಡಿದ್ದ ಬುಮ್ರಾ ಆ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫಾಕ್ಸ್ ಅವರ ವಿಕೆಟ್ ಉರುಳಿಸಿದ್ದರು. ಬಳಿಕ ಇಂಗ್ಲೆಂಡ್ ತಂಡದ ಕೊನೆಯ ವಿಕೆಟ್ ಉರುಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಆದರೆ ಇದೀಗ ಕ್ರಿಕ್‌ಬಜ್ ವರದಿ ಮಾಡಿರುವ ಪ್ರಕಾರ , ಆಯ್ಕೆ ಸಮಿತಿ ಮತ್ತು ತಂಡದ ಆಡಳಿತವು ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಿಂದ ಬುಮ್ರಾಗೆ ವಿಶ್ರಾಂತಿ ನೀಡಬಹುದು ಎಂದು ವರದಿಯಾಗಿದೆ.

ವಾಸ್ತವವಾಗಿ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಸುಧೀರ್ಘ ಟೆಸ್ಟ್ ಸರಣಿ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಪಂದ್ಯವನ್ನು ಆಡುವುದರಿಂದ ಬುಮ್ರಾ ಅವರ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯವಿದೆ.

ಹೀಗಾಗಿ ಬುಮ್ರಾ ಅವರನ್ನು ಕೊನೆಯ 2 ಟೆಸ್ಟ್‌ಗಳಿಗೆ ಫ್ರೆಶ್ ಆಗಿ ಉಳಿಸಿಕೊಳ್ಳಲು ಮುಂದಿನ ಟೆಸ್ಟ್‌ನಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಬುಮ್ರಾ ಸುಮಾರು 33 ಓವರ್‌ಗಳನ್ನು ಬೌಲ್ ಮಾಡಿದ್ದರು. ತಂಡದ ಉಳಿದ ಬೌಲರ್ಗಳಿಗೆ ಹೊಲಿಸಿದರೆ, ಬುಮ್ರಾ ಬೌಲ್ ಮಾಡಿದ ಓವರ್ಗಳ ಸಂಖ್ಯೆ ಹೆಚ್ಚಿದೆ. ಸ್ಪಿನ್ನರ್ ಸ್ನೇಹಿ ಪಿಚ್ನಲ್ಲಿ ತಂಡದ ಮೂವರು ಸ್ಪಿನ್ನರ್‌ಗಳು ಬುಮ್ರಾ ಅವರಿಗಿಂತ ಕಡಿಮೆ ಬೌಲಿಂಗ್ ಮಾಡಿದ್ದರು.

ಅಷ್ಟೇ ಅಲ್ಲ, ಮೊದಲ ಟೆಸ್ಟ್‌ನಲ್ಲೂ ಬುಮ್ರಾ ಸುಮಾರು 25 ಓವರ್‌ಗಳನ್ನು ಬೌಲ್ ಮಾಡಿದ್ದರು. ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಮುಂದಿನ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಎರಡನೇ ಟೆಸ್ಟ್‌ನಿಂದ ಸಿರಾಜ್‌ಗೆ ವಿರಾಮ ನೀಡಲಾಗಿದ್ದು, ಮೂರನೇ ಟೆಸ್ಟ್ಗೆ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಅಲ್ಲದೆ ಮೊಹಮ್ಮದ್ ಶಮಿ ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆ ಇದೆ.




