- Kannada News Photo gallery Cricket photos IND vs ENG 3rd test Shubman Gill poor performance in first innings continues
IND vs ENG: ವರ್ಷದಿಂದಲೂ ಇದೇ ಕಥೆ; ತಪ್ಪು ಸರಿಪಡಿಸಿಕೊಳ್ಳದ ಶುಭ್ಮನ್ ಗಿಲ್
Shubman Gill: ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಕೊಡುಗೆ ನೀಡಿದ್ದ ಗಿಲ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ನಲ್ಲೂ ಗಿಲ್ ಅದೇ ಆಟವನ್ನು ಮುಂದುವರೆಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸುವ ತಮ್ಮ ಪ್ರವೃತ್ತಿಯನ್ನು ಈ ಪಂದ್ಯದಲ್ಲೂ ಮುಂದುವರೆಸಿದರು.
Updated on: Feb 24, 2024 | 8:28 PM

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನು 134 ರನ್‌ಗಳ ಹಿನ್ನಡೆಯಲ್ಲಿದೆ.

ಇಂಗ್ಲೆಂಡ್ ಕಲೆಹಾಕಿರುವ 353 ರನ್ಗಳಿಗೆ ಎದುರಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ 3 ರನ್ಗಳಿಗೆ ಬ್ಯಾಟ್ ಎತ್ತಿಟ್ಟರೆ, ಟೆಸ್ಟ್‌ನಲ್ಲಿ ಮಿಶ್ರ ಪ್ರದರ್ಶನದ ಮೂಲಕ ಸಾಕಷ್ಟು ಟೀಕೆಗಳಿಗೆ ಒಳಗಾಗಿರುವ ಗಿಲ್ 38 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.

ರೋಹಿತ್ ವಿಕೆಟ್ ಬಳಿಕ ಕ್ರೀಸ್ಗೆ ಬಂದು ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ 65 ಎಸೆತಗಳನ್ನು ಎದುರಿಸಿ 6 ಬೌಂಡರಿಗಳ ಸಹಿತ 38 ರನ್ ಕಲೆಹಾಕಿದರು. ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡ ಗಿಲ್, ಇದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು.

ವಾಸ್ತವವಾಗಿ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಕೊಡುಗೆ ನೀಡಿದ್ದ ಗಿಲ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ನಲ್ಲೂ ಗಿಲ್ ಅದೇ ಆಟವನ್ನು ಮುಂದುವರೆಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸುವ ತಮ್ಮ ಪ್ರವೃತ್ತಿಯನ್ನು ಈ ಪಂದ್ಯದಲ್ಲೂ ಮುಂದುವರೆಸಿದರು.

ಕಳೆದ ಒಂದು ವರ್ಷದಲ್ಲಿ ಶುಭ್ಮನ್ ಗಿಲ್ ಅವರ ಮೊದಲ ಇನ್ನಿಂಗ್ಸ್‌ನ ದಾಖಲೆಯನ್ನು ನಾವು ನೋಡಿದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 128 ರನ್‌ಗಳ ಇನ್ನಿಂಗ್ಸ್ ಆಡಿದ್ದ ಗಿಲ್ಗೆ ಆ ನಂತರ ಒಂದೇ ಒಂದು ಅರ್ಧಶತಕವನ್ನು ಸಹ ಗಳಿಸಲು ಸಾಧ್ಯವಾಗಿಲ್ಲ.

ಆಸೀಸ್ ವಿರುದ್ಧದ ಪಂದ್ಯದ ನಂತರ 9 ಇನ್ನಿಂಗ್ಸ್‌ಗಳನ್ನಾಡಿರುವ ಗಿಲ್, ಮೊದಲ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 13, 6, 10, 2, 36, 23, 34, 0 ಮತ್ತು 38 ರನ್ ಕಲೆಹಾಕಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್ ಅವರ ಬ್ಯಾಟಿಂಗ್ ಸರಾಸರಿ 26.41 ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅದು 40 ರ ಸಮೀಪದಲ್ಲಿದೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಈ ಟೆಸ್ಟ್ ಸರಣಿಯ ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಅವರು ರಾಜ್‌ಕೋಟ್‌ನಲ್ಲಿ 91 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.

ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಕೆಲವು ಉತ್ತಮ ಆರಂಭಗಳ ಹೊರತಾಗಿಯೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿರುವ ಗಿಲ್, ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.



















