ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ (Yashasvi Jaiswal) ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾದ ಯಾವುದೇ ಎಡಗೈ ಬ್ಯಾಟರ್ಗೆ ಸಾಧ್ಯವಾಗದ ವಿಶೇಷ ದಾಖಲೆಯನ್ನು ಬರೆಯುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 117 ಎಸೆತಗಳನ್ನು ಎದುರಿಸಿ 1 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 73 ರನ್ ಬಾರಿಸಿದರು. ಈ ರನ್ಗಳೊಂದಿಗೆ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 600+ ರನ್ ಕಲೆಹಾಕಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ್ದು ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಮಾತ್ರ. 2002 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್ 6 ಇನಿಂಗ್ಸ್ಗಳಲ್ಲಿ 602 ರನ್ ಬಾರಿಸಿ ದಾಖಲೆ ಬರೆದಿದ್ದರು.
ಇದಾದ ಬಳಿಕ 2017 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಈ ದಾಖಲೆ ಮುರಿದಿದ್ದರು. ಕಿಂಗ್ ಕೊಹ್ಲಿ 8 ಇನಿಂಗ್ಸ್ಗಳ ಮೂಲಕ 655 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.
ಇದೀಗ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 7 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿರುವ ಜೈಸ್ವಾಲ್ 600+ ರನ್ ಕಲೆಹಾಕಿದ್ದಾರೆ. ಈ ಮೂಲಕ ಆಂಗ್ಲರ ವಿರುದ್ಧ ಟೆಸ್ಟ್ ಸರಣಿಯಲ್ಲಿ 600+ ರನ್ ಕಲೆಹಾಕಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದರ ಜೊತೆಗೆ ಟೆಸ್ಟ್ ಸರಣಿಯೊಂದರಲ್ಲಿ ಟೀಮ್ ಇಂಡಿಯಾ ಪರ 600+ ರನ್ ಕಲೆಹಾಕಿದ ಮೊದಲ ಎಡಗೈ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ನಿರ್ಮಿಸಿದ್ದಾರೆ. ಜೈಸ್ವಾಲ್ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಬ್ಯಾಟರ್ ಟೆಸ್ಟ್ ಸರಣಿಯೊಂದರಲ್ಲಿ ಆರು ನೂರಕ್ಕೂ ಅಧಿಕ ರನ್ ಕಲೆಹಾಕಿಲ್ಲ.
ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ನಾಲ್ಕು ಪಂದ್ಯಗಳ ಮೂಲಕ 618 ರನ್ ಬಾರಿಸಿ 22 ವರ್ಷದ ಯಶಸ್ವಿ ಜೈಸ್ವಾಲ್ ಟೆಸ್ಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Published On - 3:20 pm, Sat, 24 February 24