
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಇದುವರೆಗೆ ನಡೆದಿರುವ ಮೂರು ಪಂದ್ಯಗಳಲ್ಲಿ ಜಡೇಜಾ ರನ್‌ಗಳ ಮಳೆ ಹರಿಸಿದ್ದಾರೆ. ಇದೀಗ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಮುಂದುವರೆಸುವ ಇರಾದೆಯಲ್ಲಿರುವ ಜಡೇಜಾ ದಿಗ್ಗಜರ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ.

ರವೀಂದ್ರ ಜಡೇಜಾ ಇಂಗ್ಲೆಂಡ್‌ನಲ್ಲಿ ಇದುವರೆಗೆ ಆಡಿರುವ 27 ಇನ್ನಿಂಗ್ಸ್‌ಗಳಲ್ಲಿ 40.95 ಸರಾಸರಿಯಲ್ಲಿ 942 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳು ಸೇರಿವೆ. ಇದು ಮಾತ್ರವಲ್ಲದೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಸತತ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಜಡೇಜಾಗಿಂತ ಮೊದಲು, ವೆಸ್ಟ್ ಇಂಡೀಸ್ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಇಂಗ್ಲೆಂಡ್‌ನಲ್ಲಿ ಈ ಸಾಧನೆ ಮಾಡಿದ್ದರು. ಅವರು 6 ನೇ ಮತ್ತು 11 ನೇ ಕ್ರಮಾಂಕದ ನಡುವೆ ಬ್ಯಾಟಿಂಗ್ ಮಾಡಿ 1000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಸೋಬರ್ಸ್ ಅವರು ಇಂಗ್ಲೆಂಡ್‌ನಲ್ಲಿ ಆಡಿರುವ 16 ಇನ್ನಿಂಗ್ಸ್‌ಗಳಲ್ಲಿ 84 ಸರಾಸರಿಯಲ್ಲಿ 1097 ರನ್ ಗಳಿಸಿದ್ದಾರೆ, ಇದರಲ್ಲಿ ನಾಲ್ಕು ಶತಕಗಳು ಮತ್ತು ಐದು ಅರ್ಧಶತಕಗಳು ಸೇರಿವೆ.

ಇದೀಗ ಜಡೇಜಾ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾವಿರ ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 58 ರನ್‌ಗಳ ಅಗತ್ಯವಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ 58 ರನ್ ಬಾರಿಸಿದರೆ ಗ್ಯಾರಿ ಸೋಬರ್ಸ್‌ರಂತಹ ದಿಗ್ಗಜರ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ.

ಇದು ಮಾತ್ರವಲ್ಲದೆ ಜಡೇಜಾ ಇಂಗ್ಲೆಂಡ್‌ನಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜಡೇಜಾಗೂ ಮೊದಲು, ಸೌರವ್ ಗಂಗೂಲಿ ಮತ್ತು ರಿಷಭ್ ಪಂತ್ ಈ ಸಾಧನೆ ಮಾಡಿದ್ದಾರೆ. ಜಡೇಜಾ ಇದುವರೆಗೆ ಮೂರು ಪಂದ್ಯಗಳಲ್ಲಿ 109 ಸರಾಸರಿಯಲ್ಲಿ 327 ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ.