ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾ ಹರಿಣಗಳ ನಾಡಲ್ಲಿ ಒಂದು ತಿಂಗಳಿಗೂ ಅಧಿಕ ದಿನ ಉಳಿಯಲ್ಲಿದೆ. ಆ ಬಳಿಕ 2024 ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿ ಆರಂಭಕ್ಕೆ ಒಂದು ತಿಂಗಳ ಬಾಕಿ ಉಳಿದಿರುವುಗಾಲೇ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಬಳಿಕ ಇಂಗ್ಲೆಂಡ್ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಆ ಬಳಿಕ ಭಾರತದೆದುರು ಟೆಸ್ಟ್ ಸರಣಿಯನ್ನು ಆಡಲಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿರುವ ಮೆಕಲಮ್ ತಂಡದ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ್ದಾರೆ.
ವಾಸ್ತವವಾಗಿ ಬ್ರೆಂಡನ್ ಮೆಕಮಲ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆದ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತಂಡದ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಆಕ್ರಮಣಕಾರಿ ಆಟ ಕಂಡುಬಂದಿದೆ. ಅಲ್ಲದೆ ಭಾಝ್ ಬಾಲ್ ಕ್ರಿಕೆಟ್ ಮೂಲಕ ಮೆಕಲಮ್ ಟೆಸ್ಟ್ ಕ್ರಿಕೆಟ್ ಶೈಲಿಯನ್ನೇ ಬದಲಿಸುವ ಗುರಿ ಹೊಂದಿದ್ದಾರೆ.
ಮೆಕಲಮ್ ಆಟದಲ್ಲಿ ಆಕ್ರಮಣಕಾರಿ ತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇದು ಈಗ ಅವರ ಕೋಚಿಂಗ್ ಸಮಯದಲ್ಲಿಯೂ ಇಂಗ್ಲೆಂಡ್ ತಂಡದಲ್ಲಿ ಕಂಡುಬರುತ್ತದೆ. ಇದೀಗ ಮೆಕಲಮ್ ಭವಿಷ್ಯದಲ್ಲಿಯೂ ಅದೇ ತಂತ್ರವನ್ನು ಅಳವಡಿಸಿಕೊಳ್ಳಲಿದ್ದೇವೆ ಎಂಬ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೋವೇಶನ್ ಲ್ಯಾಬ್ಸ್ ಲೀಡರ್ಸ್ ಮೀಟ್ ಇಂಡಿಯಾದಲ್ಲಿ ಮಾತನಾಡಿದ ಮೆಕ್‌ಕುಮಲ್, ‘ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಗಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ಭಾರತ ತಂಡವು ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ ಮತ್ತು ಅವರ ವಿರುದ್ಧ ಟೆಸ್ಟ್ ಸರಣಿ ಆಡುವುದು ತುಂಬಾ ಸವಾಲಿನದಾಗಿರುತ್ತದೆ.
ನಾವು ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದರೆ ಅದು ಸ್ಮರಣೀಯವಾಗಲಿದೆ. ಆದರೆ ಒಂದು ವೇಳೆ ನಾವು ಸೋತರೂ ನಮ್ಮ ಆಟ ಆಕ್ರಮಣಕಾರಿಯಾಗಿಯೇ ಇರುತ್ತದೆ ಮತ್ತು ಮುಂದುವರೆಯಲ್ಲಿದೆ. ಭವಿಷ್ಯದಲ್ಲಿ ನಾವು ಆಡುವ ರೀತಿಯಲ್ಲಿಯೇ ಆಡುತ್ತೇವೆ ಎಂದು ಮೆಕಲಮ್ ಹೇಳಿದ್ದಾರೆ.
2024ರ ಜನವರಿಯಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಜನವರಿ 25ರಿಂದ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಈ ಸರಣಿಯು ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.
ಏಕದಿನ ವಿಶ್ವಕಪ್ ನಂತರ, ಈ ಎರಡು ತಂಡಗಳು ಈಗ ನೇರವಾಗಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ 100 ರನ್ಗಳ ಅಂತರದ ಹೀನಾಯ ಸೋಲು ಕಂಡಿತ್ತು. ಅದೇನೇ ಇರಲಿ, ಭಾರತದ ನೆಲದಲ್ಲಿ ಟೆಸ್ಟ್ ಸರಣಿ ನಡೆಯಲಿರುವುದರಿಂದ ಇಂಗ್ಲೆಂಡ್‌ಗೆ ಅದು ಅಷ್ಟು ಸುಲಭವಲ್ಲ.
Published On - 10:04 am, Tue, 5 December 23