
ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್ಗೆ 94 ರನ್ಗಳ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ರಾಹುಲ್ ಪಾಲು 46 ರನ್‌ಗಳು. ಈ ನಲ್ವತ್ತಾರು ರನ್ಗಳೊಂದಿಗೆ ಕನ್ನಡಿಗ ಪ್ರಸ್ತುತ ಸರಣಿಯಲ್ಲಿ 400+ ರನ್ ಕಲೆಹಾಕಿದ್ದಾರೆ.

ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿವೊಂದರಲ್ಲಿ ಕೆಎಲ್ ರಾಹುಲ್ ನಾನೂರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 393 ರನ್ಗಳಿಸಿದ್ದು ಅವರು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ತನ್ನದೇ ದಾಖಲೆ ಮುರಿದು ಹೊಸ ಮೈಲುಗಲ್ಲನ್ನು ದಾಟಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ 137 ರನ್ಗಳ ಭರ್ಜರಿ ಶತಕ ಸಿಡಿಸಿದ್ದರು. ಇನ್ನು ದ್ವಿತೀಯ ಟೆಸ್ಟ್ನಲ್ಲಿ 55 ರನ್ಗಳ ಕೊಡುಗೆ ನೀಡಿದ್ದರು. ಹಾಗೆಯೇ ಮೂರನೇ ಟೆಸ್ಟ್ನಲ್ಲಿ ಶತಕದೊಂದಿಗೆ ಒಟ್ಟು 139 ರನ್ ಕಲೆಹಾಕಿದ್ದರು. ಇದೀಗ ನಾಲ್ಕನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 46 ರನ್ ಬಾರಿಸಿದ್ದಾರೆ.

ಈ ಮೂಲಕ 7 ಇನಿಂಗ್ಸ್ಗಳಿಂದ 421 ರನ್ ಕಲೆಹಾಕಿ ಟೆಸ್ಟ್ ಕೆರಿಯರ್ನಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಶ್ರೇಷ್ಠ ಪ್ರದರ್ಶನದೊಂದಿಗೆ ಇಂಗ್ಲೆಂಡ್ನಲ್ಲಿ ಟೆಸ್ಟ್ನಲ್ಲಿ 1000 ಕ್ಕೂ ಅಧಿಕ ರನ್ ಕಲೆಹಾಕಿದ ಭಾರತದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ (1575), ರಾಹುಲ್ ದ್ರಾವಿಡ್ (1376), ಸುನಿಲ್ ಗವಾಸ್ಕರ್ (1152) ಮತ್ತು ವಿರಾಟ್ ಕೊಹ್ಲಿ (1096 ರನ್‌ಗಳು) ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಕೆಎಲ್ ರಾಹುಲ್ ಕೂಡ ಎಂಟ್ರಿ ಕೊಟ್ಟಿದ್ದಾರೆ.