- Kannada News Photo gallery Cricket photos IND vs ENG: Prasidh krishna conceded 102 Runs in Just 17 Overs
IND vs ENG: 102 ಎಸೆತಗಳಲ್ಲಿ ಶತಕ ಪೂರೈಸಿದ ಪ್ರಸಿದ್ಧ್ ಕೃಷ್ಣ
England vs India, 1st Test: ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ತೆಂಡೂಲ್ಕರ್-ಅ್ಯಂಡರ್ಸನ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 465 ರನ್ಗಳಿಸಿ ಆಲೌಟ್ ಆಗಿದೆ.
Updated on: Jun 23, 2025 | 7:24 AM

120 ಎಸೆತಗಳಲ್ಲಿ ಬರೋಬ್ಬರಿ 128 ರನ್… ಇದು ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಆಟಗಾರ ಪ್ರಸಿದ್ಧ್ ಕೃಷ್ಣ ಕಲೆಹಾಕಿರುವ ರನ್ಗಳಲ್ಲ. ಬದಲಾಗಿ ನೀಡಿರುವ ರನ್..! ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಗಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (101), ಶುಭ್ಮನ್ ಗಿಲ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದರು. ಈ ಸೆಂಚುರಿಗಳ ನೆರವಿನೊಂದಿಗೆ ಭಾರತ ತಂಡವು 471 ರನ್ ಕಲೆಹಾಕಿದ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ವೇಗಿಗಳಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಅದರಲ್ಲೂ ಪ್ರಸಿದ್ಧ್ ಕೃಷ್ಣ ಓವರ್ಗಳಲ್ಲಿ ಇಂಗ್ಲೆಂಡ್ ದಾಂಡಿಗರು ನಿರಾಯಾಸವಾಗಿ ರನ್ ಕಲೆಹಾಕುತ್ತಿರುವುದು ಕಂಡು ಬಂತು.

ಪರಿಣಾಮ ಪ್ರಸಿದ್ಧ್ ಕೃಷ್ಣ ಕೇವಲ 17 ಓವರ್ಗಳಲ್ಲಿ 102 ರನ್ ಬಿಟ್ಟು ಕೊಟ್ಟರು. ನೂರು ರನ್ಗಳ ಬಳಿಕ ಕೂಡ ಪ್ರಸಿದ್ಧ್ ಲಯಕ್ಕೆ ಮರಳಲಿಲ್ಲ. ಬದಲಾಗಿ ಮತ್ತಷ್ಟು ದುಬಾರಿಯಾದರು. ಈ ಮೂಲಕ 20 ಓವರ್ಗಳಲ್ಲಿ ಬರೋಬ್ಬರಿ 128 ರನ್ಗಳನ್ನು ನೀಡಿದರು. ಅಂದರೆ ಪ್ರತಿ ಓವರ್ಗೆ 6.4 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟರು. ಇದರ ನಡುವೆ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಸಮಾಧಾನಕರ.

ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಕೂಡ ರನ್ ಸೋರಿಕೆ ಮಾಡಿದರು. ಪರಿಣಾಮ ಸಿರಾಜ್ ಎಸೆದ 22 ಓವರ್ಗಳಲ್ಲಿ ಇಂಗ್ಲೆಂಡ್ ದಾಂಡಿಗರು 100 ರನ್ ಕಲೆಹಾಕಿದರು. ಇದಾದ ಬಳಿಕ ಲಯಕ್ಕೆ ಮರಳಿದ ಸಿರಾಜ್ 27 ಓವರ್ಗಳಲ್ಲಿ 122 ರನ್ ನೀಡಿ 2 ವಿಕೆಟ್ ಕಬಳಿಸಿದರು.

ಇನ್ನೊಂದೆಡೆ ಏಕಾಂಗಿಯಾಗಿ ಇಂಗ್ಲೆಂಡ್ ದಾಂಡಿಗರನ್ನು ಕಾಡಿದ ಜಸ್ಪ್ರೀತ್ ಬುಮ್ರಾ 24.4 ಕೇವಲ 83 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 465 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 6 ರನ್ಗಳ ಮುನ್ನಡೆ ಪಡೆದುಕೊಂಡಿದೆ.




