KL Rahul: ಆಂಗ್ಲರ ಮುಂದೆ ಕನ್ನಡಿಗನ ಪಾತ್ರ ನಿರ್ಣಾಯಕ
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಹೆಡಿಂಗ್ಲೆ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಜಯಭೇರಿ ಬಾರಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.
Updated on: Jun 19, 2025 | 12:30 PM

ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲು ಯಂಗ್ ಇಂಡಿಯಾ ಸಜ್ಜಾಗಿದೆ. ಈ ಯಂಗ್ ಇಂಡಿಯಾದಲ್ಲಿರುವ ಅತ್ಯಂತ ಅನುಭವಿ ಬ್ಯಾಟರ್ ಎಂದರೆ ನಮ್ಮ ಕನ್ನಡಿಗ ಕೆಎಲ್ ರಾಹುಲ್ (KL Rahul). 33 ವರ್ಷದ ರಾಹುಲ್ ಈಗಾಗಲೇ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿಯೇ ಈ ಬಾರಿ ಕನ್ನಡಿಗನ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಈ ನಿರೀಕ್ಷೆಗಳೊಂದಿಗೆ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಏಕೆಂದರೆ ಭಾರತ ಟೆಸ್ಟ್ ತಂಡದ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ರೋಹಿತ್ ಶರ್ಮಾ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದೆ ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ರಾಹುಲ್, ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ್ದರು.

ಹೀಗಾಗಿ ಈ ಬಾರಿ ಶುಭಾರಂಭದ ಜವಾಬ್ದಾರಿ ಕೆಎಲ್ ರಾಹುಲ್ ಹೆಗಲೇರುವುದು ಬಹುತೇಕ ಖಚಿತ. ಏಕೆಂದರೆ ಇಂಗ್ಲೆಂಡ್ನಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿದ ಅನುಭವ ಕೂಡ ಕೆಎಲ್ಆರ್ ಜೊತೆಗಿದೆ. ಈ ಒಂಭತ್ತು ಪಂದ್ಯಗಳಲ್ಲಿ 18 ಇನಿಂಗ್ಸ್ ಆಡಿರುವ ರಾಹುಲ್ 614 ರನ್ ಕಲೆಹಾಕಿದ್ದಾರೆ. ಅಂದರೆ 34.11 ಸರಾಸರಿಯಲ್ಲಿ ಆಂಗ್ಲರ ನಾಡಿನಲ್ಲಿ ರನ್ಗಳಿಸಿದ್ದಾರೆ.

ಈ 18 ಇನಿಂಗ್ಸ್ಗಳಲ್ಲಿ ಕೆಎಲ್ ರಾಹುಲ್ ಬ್ಯಾಟ್ನಿಂದ 2 ಭರ್ಜರಿ ಶತಕಗಳು ಸಹ ಮೂಡಿಬಂದಿವೆ. ಹಾಗೆಯೇ ಒಂದು ಅರ್ಧಶತಕವನ್ನು ಸಹ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಕೂಡ ಕೆಎಲ್ ರಾಹುಲ್. ಇಂಗ್ಲೆಂಡ್ ವಿರುದ್ಧ ಈವರೆಗೆ 24 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ ಒಟ್ಟು 955 ರನ್ ಕಲೆಹಾಕಿದ್ದಾರೆ.

ಹೀಗಾಗಿಯೇ ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಸರಣಿ ಗೆಲ್ಲಬೇಕಿದ್ದರೆ ಕನ್ನಡಿಗನ ಪಾತ್ರ ನಿರ್ಣಾಯಕವಾಗಲಿದೆ. ಈ ಜವಾಬ್ದಾರಿಯುತ ಪಾತ್ರದೊಂದಿಗೆ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಸೆಟೆದು ನಿಂತು ಭಾರತ ತಂಡಕ್ಕೆ ಗೆಲುವು ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.









