- Kannada News Photo gallery Cricket photos Tilak Varma will be playing 4 county matches for Hampshire
4 ಪಂದ್ಯಗಳಿಗೆ ವಿದೇಶಿ ತಂಡ ಸೇರಿಕೊಂಡ ತಿಲಕ್ ವರ್ಮಾ
Tilak Varma: ಟೀಮ್ ಇಂಡಿಯಾದ ಭರವಸೆಯ ಯುವ ದಾಂಡಿಗರಲ್ಲಿ ತಿಲಕ್ ವರ್ಮಾ ಕೂಡ ಒಬ್ಬರು. ಭಾರತದ ಪರ ಈವರೆಗೆ 25 ಟಿ20 ಪಂದ್ಯಗಳನ್ನಾಡಿರುವ ತಿಲಕ್ ವರ್ಮಾ ಒಟ್ಟು 749 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 2 ಭರ್ಜರಿ ಶತಕಗಳು ಹಾಗೂ 3 ಅರ್ಧಶತಕಗಳು ಮೂಡಿಬಂದಿವೆ.
Updated on: Jun 19, 2025 | 10:35 AM

ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ತಿಲಕ್ ವರ್ಮಾ ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದರಂತೆ ಈ ಬಾರಿಯ ಸೀಸನ್ನಲ್ಲಿ ಹ್ಯಾಂಪ್‌ಶೈರ್ ತಂಡದ ಪರ ಕಣಕ್ಕಿಳಿಯಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದಂತೆ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ ಡಿವಿಷನ್ ಒನ್ ಟೂರ್ನಿಯಲ್ಲಿ ತಿಲಕ್ ವರ್ಮಾ 4 ಪಂದ್ಯಗಳನ್ನಾಡಲಿದ್ದಾರೆ.

22 ವರ್ಷದ ತಿಲಕ್ ವರ್ಮಾ ಜೂನ್ 22 ರಂದು ಚೆಲ್ಮ್ಸ್‌ಫೋರ್ಡ್‌ನ ಕೌಂಟಿ ಮೈದಾನದಲ್ಲಿ ನಡೆಯಲಿರುವ ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಂಪ್‌ಶೈರ್ ಪರ ಪಾದಾರ್ಪಣೆ ಮಾಡಲಿದ್ದು, ಇದಾದ ಬಳಿಕ ವೋರ್ಸೆಸ್ಟರ್‌ಶೈರ್, ನಾಟಿಂಗ್‌ಹ್ಯಾಮ್‌ಶೈರ್ ಮತ್ತು ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ತಿಲಕ್ ವರ್ಮಾ ಭಾರತದ ಅಂಗಳದಲ್ಲಿ ಈವರೆಗೆ 18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 28 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು 50.16 ಸರಾಸರಿಯಲ್ಲಿ 1,204 ರನ್ ಗಳಿಸಿದ್ದಾರೆ. ಇದರ ನಡುವೆ 5 ಶತಕಗಳು ಮತ್ತು 4 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಕೆಲ ಪಂದ್ಯಗಳಲ್ಲಿ ಸ್ಪಿನರ್ ಆಗಿಯೂ ಕಾಣಿಸಿಕೊಂಡಿರುವ ಅವರು ಒಟ್ಟು ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿರುವ ತಿಲಕ್ ವರ್ಮಾ ಎರಡು ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ 13 ಇನಿಂಗ್ಸ್ಗಳಲ್ಲಿ ಒಟ್ಟು 343 ರನ್ ಕಲೆಹಾಕಿದ್ದರು. ಅಂದರೆ ಕೇವಲ 31.18 ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದರು.

ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. 2023 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿರುವ ತಿಲಕ್ ವರ್ಮಾ ಇಲ್ಲಿಯವರೆಗೆ 25 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 155.07 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 749 ರನ್ ಕಲೆಹಾಕಿದ್ದಾರೆ. ಇದೀಗ ಟೆಸ್ಟ್ ತಂಡದಲ್ಲಿ ಅವಕಾಶವನ್ನು ಎದುರು ನೋಡುತ್ತಿರುವ ತಿಲಕ್ ವರ್ಮಾ, ಇಂಗ್ಲೆಂಡ್ನಲ್ಲಿ ರೆಡ್ ಬಾಲ್ ಪಂದ್ಯಗಳನ್ನಾಡಲು ನಿರ್ಧರಿಸಿದ್ದಾರೆ.














