Updated on: Nov 29, 2021 | 5:28 PM
ಭಾರತ-ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದೆ. ಟೀಮ್ ಇಂಡಿಯಾ ನೀಡಿದ 284 ರನ್ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. 86ನೇ ಓವರ್ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 147 ರನ್ಗಳಿಸಿತ್ತು. ಈ ವೇಳೆ ಗೆಲುವು ಭಾರತದ್ದೇ ಎಂದು ಎಲ್ಲರೂ ಭಾವಿಸಿದ್ದರು.
ಆದರೆ 8ನೇ ಕ್ರಮಾಂಕದಲ್ಲಿ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ನ್ಯೂಜಿಲೆಂಡ್ ಕ್ರಿಕೆಟರ್ ಟೀಮ್ ಇಂಡಿಯಾ ಬೌಲರುಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. ಭಾರತೀಯ ಅನುಭವಿ ಸ್ಪಿನ್ನರ್ಗಳ ಮುಂದೆ 22 ವರ್ಷದ ರಚಿನ್ ತಡೆಗೋಡೆಯಾಗಿ ನಿಂತು ಏಕಾಂಗಿಯಾಗಿ ಹೋರಾಟ ಮುಂದುವರೆಸಿದರು. ಈ ಹಂತದಲ್ಲಿ 90ನೇ ಓವರ್ನಲ್ಲಿ ಟಿಮ್ ಸೌಥಿಯನ್ನು ಜಡೇಜಾ ಔಟ್ ಮಾಡಿದರು. ಈ ವೇಳೆ ಮತ್ತೊಮ್ಮೆ ಭಾರತದ ಗೆಲುವಿನ ಆಸೆ ಚಿಗುರಿತು.
ಆದರೆ 10ನೇ ವಿಕೆಟ್ಗೆ ರಚಿನ್ ಜೊತೆಗೂಡಿದ ಮತ್ತೋರ್ವ ಭಾರತೀಯ ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗ ಅಜಾಝ್ ಪಟೇಲ್ ಕೂಡ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದರು. ಅದರಂತೆ ಇಬ್ಬರೂ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತರು. ಅಂತಿಮ 9 ಓವರ್ಗಳನ್ನು ಜೊತೆಯಾಗಿ ಎದುರಿಸಿದ ರಚಿನ್ ಹಾಗೂ ಏಜಾಝ್ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ಅಂದರೆ ಇಬ್ಬರೂ ಟೆಸ್ಟ್ ಕ್ರಿಕೆಟ್ ಹೇಗೆ ಆಡಬೇಕೆಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟರು.
ಅಂತಿಮವಾಗಿ 91 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ ಅಜೇಯ 18 ರನ್ಗಳಿಸಿದರೆ, ಏಜಾಝ್ ಪಟೇಲ್ 23 ಎಸೆತಗಳಲ್ಲಿ ಕೇವಲ 2 ರನ್ಗಳಿಸಿ ಅಜೇಯರಾಗಿ ಉಳಿದರು. ಕೊನೆಯ 8 ಓವರ್ಗಳಲ್ಲಿ ಅತ್ಯುತ್ತಮ ರಕ್ಷಣಾತ್ಮಕ ಆಟವಾಡಿದ ಭಾರತೀಯ ಮೂಲದ ಈ ಜೋಡಿ ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 165 ರನ್ಗಳಿಸುವ ಮೂಲಕ ಟೀಮ್ ಇಂಡಿಯಾ ಪಾಲಿನ ಗೆಲುವನ್ನು ಕಸಿದುಕೊಂಡರು.
ಅಂದಹಾಗೆ ರಚಿನ್ ರವೀಂದ್ರ ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಜಿಲ್ಯಾಂಡ್ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಇದೀಗ ರಚಿನ್ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇನ್ನು ಮುಂಬೈ ಮೂಲದ ಏಜಾಝ್ ಪಟೇಲ್ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ನ್ಯೂಜಿಲೆಂಡ್ ತಂಡದಲ್ಲಿ ಎಂಬುದು ವಿಶೇಷ. ಇದೀಗ ಇಬ್ಬರು ಭಾರತೀಯ ಮೂಲದ ಕ್ರಿಕೆಟಿಗರೇ ಕ್ರಿಕೆಟ್ ಕ್ರಿಕೆಟ್ ರೋಚಕ ಹೋರಾಟದಲ್ಲಿ ಟೀಮ್ ಇಂಡಿಯಾದ ಗೆಲುವನ್ನು ಕಸಿದುಕೊಂಡಿರುವುದು ವಿಶೇಷ.