Updated on: Nov 29, 2021 | 2:57 PM
ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಕ್ರೀಡಾ ಬಯೋಪಿಕ್ ಚಿತ್ರ ರೆಡಿಯಾಗಿದೆ. 1983 ರ ವಿಶ್ವಕಪ್ ಐತಿಹಾಸಿಕ ಗೆಲುವಿನ ಹಿಂದಿರುವ ರಿಯಲ್ ಕಹಾನಿಯನ್ನು ತೆರೆ ಮೇಲೆ ತರಲಾಗಿದ್ದು, "83" ಹೆಸರಿನಲ್ಲಿ ಮೂಡಿಬಂದಿರುವ ಈ ಚಿತ್ರವು ಡಿಸೆಂಬರ್ 24 ರಂದು ತೆರೆ ಕಾಣಲಿದೆ. ಈ ಚಿತ್ರಕ್ಕೆ ಬಾಲಿವುಡ್ನ ಯಶಸ್ವಿ ಡೈರೆಕ್ಟರ್ ಭಜರಂಗಿ ಭಾಯಿಜಾನ್ ಖ್ಯಾತಿಯ ನಿರ್ದೇಶಕ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವುದು ವಿಶೇಷ.
ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಟೌನ್ನಲ್ಲಿ ಹೊಸ ಹಲ್ಚಲ್ ಸೃಷ್ಟಿಸಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಹಾಗೂ ಸಿನಿಪ್ರಿಯರಿಂದ 83 ಚಿತ್ರದ ವಿಡಿಯೋ ತುಣುಕುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರದಲ್ಲಿ ಟೀಮ್ ಇಂಡಿಯಾ ನಾಯಕನಾಗಿ ರಣವೀರ್ ಸಿಂಗ್ ಅಭಿನಯಿಸಿದ್ದು, ಕಪಿಲ್ ದೇವ್ ಅವರ ಪಾತ್ರಕ್ಕೆ ರಣವೀರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ನ್ಯಾಯ ಒದಗಿಸಿದ್ದಾರೆ ಎಂಬ ಮಾತುಗಳು ಬಿಟೌನ್ನಿಂದ ಕೇಳಿ ಬರುತ್ತಿವೆ. ಇದಲ್ಲದೆ ಈ ಚಿತ್ರದಲ್ಲಿ ತಂದೆಯ ನೈಜ ಪಾತ್ರದಲ್ಲಿ ಸ್ವತಃ ಮಕ್ಕಳೇ ಅಭಿನಯಿಸಿರುವುದು ಮತ್ತೊಂದು ವಿಶೇಷ.
ಹೌದು, ವಿಶ್ವಕಪ್ ವಿಜೇತ ತಂಡದ ಆಟಗಾರ ಸಂದೀಪ್ ಪಾಟೀಲ್ ಅವರ ಪಾತ್ರದಲ್ಲಿ 33 ವರ್ಷದ ಮಗ ಚಿರಾಗ್ ಪಾಟೀಲ್ ನಟಿಸಿದ್ದಾರೆ. ಮರಾಠಿ ಚಿತ್ರರಂಗದ ನಟನಾಗಿರುವ ಚಿರಾಗ್ ಇದೀಗ ತಂದೆಯ ಪಾತ್ರದೊಂದಿಗೆ ಬಾಲಿವುಡ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಹಾಗೆಯೇ ವಿಶ್ವಕಪ್ ಫೈನಲ್ನ ಎದುರಾಳಿ ವೆಸ್ಟ್ ಇಂಡೀಸ್ ತಂಡದ ಖ್ಯಾತ ವೇಗದ ಬೌಲರ್ ಮಾಲ್ಕಾಮ್ ಮಾರ್ಷಲ್ ಪಾತ್ರದಲ್ಲಿ ಅವರ ಪುತ್ರ ಮಿಚೆಲ್ ಮಾರ್ಷಲ್ ಬಣ್ಣ ಹಚ್ಚಿದ್ದಾರೆ.
ವಿಶ್ವಕಪ್ ತಂಡದ ಟೀಮ್ ಇಂಡಿಯಾ ಮಾರಕ ವೇಗಿ ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಪಂಜಾಬಿ ಸಿಂಗರ್ ಅಮ್ಮಿ ವಿರ್ಕ್ ನಟಿಸಿದ್ದಾರೆ.
ಇವರಲ್ಲದೆ ವಿಶ್ವಕಪ್ ವಿಜೇತ ತಂಡದ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ತಮಿಳು ನಟ ಜೀವಾ ಜೀವ ತುಂಬಿದ್ದಾರೆ.
ಅದೇ ರೀತಿ ವಿಶ್ವಕಪ್ ವಿಜೇತ ತಂಡದ ವಿಕೆಟ್ ಕೀಪರ್ ಕನ್ನಡಿಗ ಸೈಯ್ಯದ್ ಕಿರ್ಮಾನಿ ಪಾತ್ರದಲ್ಲಿ ಬಾಲಿವುಡ್ ನಟ ಸಾಹಿಲ್ ಕಟ್ಟರ್ ಅಭಿನಯಿಸಿದ್ದಾರೆ.
ಇನ್ನು 80 ರ ದಶಕ ಕ್ರಿಕೆಟ್ ಸೂಪರ್ ಸ್ಟಾರ್ ಸುನೀಲ್ ಗಾವಸ್ಕರ್ ರೋಲ್ನಲ್ಲಿ ಯುವ ನಟ ತಾಹಿರ್ ರಾಜ್ ಬ್ಯಾಟ್ ಬೀಸಿರುವುದು ವಿಶೇಷ.
ಅಷ್ಟೇ ಅಲ್ಲದೆ ವಿಶ್ವಕಪ್ ವಿಜೇತ ತಂಡದ ಆಲ್ರೌಂಡರ್ ಮೊಹಿಂದರ್ ಅಮರನಾಥ್ ಪಾತ್ರದಲ್ಲಿ ರಂಗ್ಬಾಝ್ ಚಿತ್ರನಟ ಸಾಕಿಬ್ ಸಲೀಂ ನಟಿಸಿದ್ದಾರೆ.
ಇನ್ನು ಪಂಜಾಬಿ ಯುವ ಗಾಯಕ ಹಾರ್ಡಿ ಸಂಧು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಟೀಮ್ ಇಂಡಿಯಾದ ಆಲ್ರೌಂಡರ್ ಮದನ್ ಲಾಲ್ ಆಗಿ ಬಣ್ಣ ಹಚ್ಚಿದ್ದಾರೆ.
ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್ ಕ್ರಾಂತಿಗೆ ನಾಂದಿಯಾಡಿದ 1983 ರ ವಿಶ್ವಕಪ್ ಜರ್ನಿಯ ಕಹಾನಿಯ ತಿಳಿಸುವ 83 ಚಿತ್ರದ ಟ್ರೈಲರ್ ನಾಳೆ (ನ.30) ಬಿಡುಗಡೆಯಾಗಲಿದ್ದು, ಹಾಗೆಯೇ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ಡಿಸೆಂಬರ್ 24 ರಂದು 83 ಸಿನಿಮಾ ರಿಲೀಸ್ ಆಗಲಿದೆ.