ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇತ್ತ ಟೀಮ್ ಇಂಡಿಯಾ ಪರ ಆಡುವ ಬಳಗದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ ಕೂಡ ಸೇರ್ಪಡೆಯಾಗಿದೆ.
ಹೌದು, ಇದು ವಿರಾಟ್ ಕೊಹ್ಲಿ 550ನೇ ಅಂತಾರಾಷ್ಟ್ರೀಯ ಮ್ಯಾಚ್. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 550 ಪಂದ್ಯಗಳನ್ನಾಡಿರುವುದು ಕೇವಲ 6 ಆಟಗಾರರು ಮಾತ್ರ. ಈ ಸಾಧನೆ ಮಾಡಿದ ಆರನೇ ಆಟಗಾರ ವಿರಾಟ್ ಕೊಹ್ಲಿ. ಅಲ್ಲದೆ ಈ ಮೈಲುಗಲ್ಲು ಮುಟ್ಟಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 550+ ಪಂದ್ಯಗಳನ್ನಾಡಿದ ಆಟಗಾರರೆಂದರೆ ಸಚಿನ್ ತೆಂಡೂಲ್ಕರ್ (ಭಾರತ), ಮಹೇಲ ಜಯವರ್ಧನೆ (ಶ್ರೀಲಂಕಾ), ಕುಮಾರ ಸಂಗಾಕ್ಕರ (ಶ್ರೀಲಂಕಾ), ಸನತ್ ಜಯಸೂರ್ಯ (ಶ್ರೀಲಂಕಾ) ಹಾಗೂ ರಿಕಿ ಪಾಟಿಂಗ್ (ಆಸ್ಟ್ರೇಲಿಯಾ). ಇದೀಗ ಈ ಸಾಧಕರ ಪಟ್ಟಿಗೆ ವಿರಾಟ್ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ.
ಟೀಮ್ ಇಂಡಿಯಾ ಪರ ಈವರೆಗೆ 550* ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಒಟ್ಟು 27598* ರನ್ ಕಲೆಹಾಕಿದ್ದಾರೆ. ಈ ವೇಳೆ ಕಿಂಗ್ ಕೊಹ್ಲಿ ಬ್ಯಾಟ್ನಿಂದ 82 ಶತಕಗಳು ಮೂಡಿಬಂದಿವೆ. ಹಾಗೆಯೇ 9 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಇದರ ಜೊತೆ 336 ಕ್ಯಾಚ್ಗಳನ್ನು ಹಿಡಿದಿರುವುದು ವಿಶೇಷ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 1989 ರಿಂದ 2013ರ ನಡುವೆ ಸಚಿನ್ ಟೀಮ್ ಇಂಡಿಯಾ ಪರ ಒಟ್ಟು 664 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 100 ಶತಕಗಳೊಂದಿಗೆ 34357 ರನ್ ಕಲೆಹಾಕಿದ್ದಲ್ಲದೆ, 201 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.
Published On - 2:25 pm, Sun, 9 March 25