IND vs NZ: ಎರಡನೇ ಟೆಸ್ಟ್ಗೆ ರಿಷಭ್ ಪಂತ್ ಡೌಟ್
India vs New Zealand: ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಅಕ್ಟೋಬರ್ 24 ರಿಂದ ಶುರುವಾಗಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಿಂದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊರಗುಳಿಯುವ ಸಾಧ್ಯತೆಯಿದೆ.
Updated on: Oct 21, 2024 | 11:42 AM

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪಂತ್ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದು, ಹೀಗಾಗಿ ಅವರು ದ್ವಿತೀಯ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ವೇಳೆ ರಿಷಭ್ ಪಂತ್ ಅವರ ಮೊಣಕಾಲಿಗೆ ಚೆಂಡು ಬಡಿದಿತ್ತು. ರವೀಂದ್ರ ಜಡೇಜಾ ಎಸೆದ ಎಸೆತವು ಕೀಪಿಂಗ್ ಮಾಡುತ್ತಿದ್ದ ಪಂತ್ ಅವರ ಕಾಲಿಗೆ ನೇರವಾಗಿ ಬಡಿಯಿತು. ಈ ವೇಳೆ ತ್ರೀವ್ರ ನೋವಿನಿಂದ ನರಳಿದ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು.

ಇದಾಗ್ಯೂ ಭಾರತ ತಂಡದ ದ್ವಿತೀಯ ಇನಿಂಗ್ಸ್ ವೇಳೆ ರಿಷಭ್ ಪಂತ್ ಬ್ಯಾಟಿಂಗ್ಗೆ ಆಗಮಿಸಿದ್ದರು. ಅಲ್ಲದೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ 105 ಎಸೆತಗಳಲ್ಲಿ 99 ರನ್ ಬಾರಿಸಿದ್ದರು. ಇದೇ ವೇಳೆ ಅವರು ರನ್ ಓಡಲು ಕಷ್ಟಪಡುತ್ತಿರುವುದು ಕಂಡು ಬಂದಿತ್ತು.

ಇದೇ ನೋವಿನ ಕಾರಣ ಅವರು ದ್ವಿತೀಯ ಇನಿಂಗ್ಸ್ನಲ್ಲಿ ವಿಕೆಟ್ ಕೀಪಿಂಗ್ ಮಾಡಿಲಿಲ್ಲ. ಬದಲಾಗಿ ಧ್ರುವ್ ಜುರೇಲ್ ವಿಕೆಟ್ ಕೀಪರ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮೊಣಕಾಲಿನ ನೋವಿನಿಂದ ಬಳಲುತ್ತಿರುವ ರಿಷಭ್ ಪಂತ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದ್ದು, ಗುರುವಾರದೊಳಗೆ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರು ಕಣಕ್ಕಿಳಿಯಬಹುದು.

ಇನ್ನು ರಿಷಭ್ ಪಂತ್ ಹೊರಗುಳಿದರೆ ಧ್ರುವ್ ಜುರೇಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜುರೇಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಲ್ಲದೆ ವಿಕೆಟ್ ಕೀಪಿಂಗ್ ಮೂಲಕ ಕೂಡ ಗಮನ ಸೆಳೆದಿದ್ದರು. ಹೀಗಾಗಿ ಪಂತ್ ಬದಲಿಯಾಗಿ ಧ್ರುವ್ ಜುರೇಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
