
ಏಷ್ಯಾಕಪ್ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಬಾರಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ (Abhishek sharma) ಕಣಕ್ಕಿಳಿಯಲ್ವಾ?.

ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಅಭಿಷೇಕ್ ಶರ್ಮಾ ಕಾಣಿಸಿಕೊಳ್ಳದಿರುವುದು. ಅಲ್ಲದೆ ಸೂಪರ್ ಓವರ್ನಲ್ಲೂ ಕಣಕ್ಕಿಳಿದಿರಲಿಲ್ಲ. ಲಂಕಾ ವಿರುದ್ಧದ ಪಂದ್ಯದ 10ನೇ ಓವರ್ ವೇಳೆ ಸ್ನಾಯು ಸೆಳೆತದ ಕಾರಣ ಅಭಿಷೇಕ್ ಶರ್ಮಾ ಮೈದಾನ ತೊರೆದಿದ್ದರು.

ಇದಾದ ಬಳಿಕ ಅಭಿಷೇಕ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿಯೇ ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಯುವ ಎಡಗೈ ದಾಂಡಿಗ ಕಣಕ್ಕಿಳಿಯುವುದಿಲ್ಲವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇದೀಗ ಸ್ಪಷ್ಟ ಉತ್ತರವಂತು ಸಿಕ್ಕಿದೆ.

ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಅಭಿಷೇಕ್ ಶರ್ಮಾ ಅವರ ನೋವಿನ ಸಮಸ್ಯೆಯ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಅಭಿಷೇಕ್ ಅವರ ಸ್ನಾಯು ಸೆಳೆತದ ಸಮಸ್ಯೆ ಸರಿಯಾಗಿದ್ದು, ಈಗ ಚೆನ್ನಾಗಿದ್ದಾರೆ ಎಂದಿದ್ದಾರೆ. ಈ ಮೂಲಕ ಮುಂಬರುವ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ.

ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಕೂಡ ಸ್ನಾಯು ಸೆಳೆತದಿಂದ ಸಮಸ್ಯೆಯಿಂದ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದಾಗ್ಯೂ ಅವರು ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂದು ಮೊರ್ನೆ ಮೊರ್ಕೆಲ್ ತಿಳಿಸಿದ್ದಾರೆ. ಇಂದು ಹಾರ್ದಿಕ್ ಪಾಂಡ್ಯ ಅವರ ಫಿಸಿಯೋ ಟೆಸ್ಟ್ ನಡೆಯಲಿದ್ದು, ಇದಾದ ಬಳಿಕ ಅವರು ಪಾಕ್ ವಿರುದ್ಧ ಆಡುತ್ತಾರೋ ಇಲ್ಲವಾ ಎಂಬುದು ನಿರ್ಧಾರವಾಗಲಿದೆ ಎಂದಿದ್ದಾರೆ.