ವಿಶ್ವದ ಅತ್ಯಂತ ಐತಿಹಾಸಿಕ ಮೈದಾನಗಳಲ್ಲಿ ಒಂದಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಕಾಲವೇ ಹೇಳಬೇಕು ಆದರೆ ಅದಕ್ಕೂ ಮುನ್ನ ಈ ನೆಲದ ನಾಡಿಮಿಡಿತವನ್ನು ಅಳೆಯುವ ಅಗತ್ಯವಿದೆ. ಹೀಗಾಗಿ ಈ ಮೈದಾನದ ಹಿಂದಿನ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಎಂಬುದರ ಬಗ್ಗೆ ಇಲ್ಲಿದೆ ವಿವರ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ, ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ಯಾವಾಗಲೂ ಪ್ರಯೋಜನ ಸಿಗಲಿದೆ. ಚೇಸಿಂಗ್ ತಂಡ ಎಂಸಿಜಿಯಲ್ಲಿ ಇದುವರೆಗೆ 18 ಪಂದ್ಯಗಳಲ್ಲಿ 10 ರಲ್ಲಿ ಗೆದ್ದಿದೆ. ಅದೇ ಸಮಯದಲ್ಲಿ, 7 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಟಿ20 ಸರಾಸರಿ ಸ್ಕೋರ್ 139 ರನ್ ಆಗಿದ್ದರೆ ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ 127 ರನ್ ಆಗಿದೆ. ಅಂದರೆ ಇಲ್ಲಿ ಬ್ಯಾಟಿಂಗ್ ಕೂಡ ಅಷ್ಟು ಸುಲಭವಲ್ಲ. ಹೀಗಾಗಿ ಬೌಲರ್‌ಗಳಿಗೆ ಸಹಾಯಕವಾದ ಈ ಪಿಚ್ನಲ್ಲಿ ಬ್ಯಾಟರ್ಸ್ಗಳು ಎಚ್ಚರಿಕೆಯಿಂದ ಆಟವಾಡುವುದು ಬಹಳ ಮುಖ್ಯ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡ ಬಿಗ್ ಸ್ಕೋರ್ ಮಾಡಿದ್ದು, 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 184 ರನ್ ಕಲೆಹಾಕಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಲಾ ಅರ್ಧಶತಕ ಸಿಡಿಸಿದ್ದರು.
ಅದೇ ಸಮಯದಲ್ಲಿ, ಈ ಮೈದಾನದಲ್ಲಿ ಕಡಿಮೆ ಸ್ಕೋರ್ ಕೂಡ ಟೀಮ್ ಇಂಡಿಯಾದದ್ದಾಗಿದ್ದು, 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 74 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತಕ್ಕೆ ಈ ಮೈದಾನ ಸಿಹಿಕಹಿ ಅನುಭವ ನೀಡಿರುವುದನ್ನು ಇಲ್ಲಿ ಸ್ಪಷ್ಟವಾಗಿದೆ ಕಾಣಬಹುದಾಗಿದೆ. ಆದ್ದರಿಂದ ರೋಹಿತ್ ಪಡೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ.
Published On - 10:58 am, Sun, 23 October 22