Updated on: Jan 10, 2022 | 3:23 PM
ಭಾರತ-ದಕ್ಷಿಣ ಆಫ್ರಿಕಾ ನಡುವಣ ಕೊನೆಯ ಟೆಸ್ಟ್ ಪಂದ್ಯವು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಜಯ ಸಾಧಿಸಿ ಸಮಬಲ ಹೊಂದಿದೆ. ಇದೀಗ ಕೇಪ್ ಟೌನ್‌ನಲ್ಲಿ ನಡೆಯಲಿರುವ ಪಂದ್ಯವು ಸರಣಿಯ ಫಲಿತಾಂಶದಲ್ಲಿ ನಿರ್ಣಾಯಕವಾಗಲಿದೆ. ಬೌನ್ಸಿ ಪಿಚ್ ಎನಿಸಿಕೊಂಡಿರುವ ಕೇಪ್ ಟೌನ್‌ನಲ್ಲಿ ಬೌಲರುಗಳೇ ಪರಾಕ್ರಮ ಮೆರೆಯುವ ಸಾಧ್ಯತೆಯಿದ್ದು, ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಬೇಕಾದರೆ ಬೌಲರ್ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬರಬೇಕಿದೆ. ಆದರೆ ಟೀಮ್ ಇಂಡಿಯಾ ಪರ ಅತಿರಥ ಮಹಾರಥರಂತಹ ಬೌಲರುಗಳು ಕಣಕ್ಕಿಳಿದರೂ, ಈ ಮೈದಾನದಲ್ಲಿ ಇದುವರೆಗೆ ಭಾರತ ಗೆದ್ದಿಲ್ಲ ಎಂಬುದು ವಿಶೇಷ. ಇದಾಗ್ಯೂ ಈ ಪಿಚ್ನಲ್ಲಿ ಟೀಮ್ ಇಂಡಿಯಾದ ಕೆಲ ಬೌಲರುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರೆಂದರೆ....
1- ಜಾವಗಲ್ ಶ್ರೀನಾಥ್: ಕೇಪ್ ಟೌನ್ ಪಿಚ್ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಕನ್ನಡಿಗ ಜಾವಗಲ್ ಶ್ರೀನಾಥ್ ಹೆಸರಿನಲ್ಲಿದೆ. ಹೊಂದಿದ್ದಾರೆ. ಈ ಪಿಚ್ನಲ್ಲಿ 2 ಟೆಸ್ಟ್ ಪಂದ್ಯವಾಡಿರುವ ಶ್ರೀನಾಥ್ ಒಟ್ಟು 12 ವಿಕೆಟ್ಗಳನ್ನು ಕಬಳಿಸಿದ್ದಾರೆ.
2- ಅನಿಲ್ ಕುಂಬ್ಳೆ: ಕೇಪ್ ಟೌನ್‌ನಲ್ಲಿ 3 ಪಂದ್ಯಗಳನ್ನಾಡಿರುವ ಅನಿಲ್ ಕುಂಬ್ಳೆ 11 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಶ್ರೀನಾಥ್ ನಂತರ ಎರಡನೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
3- ಜಹೀರ್ ಖಾನ್: ಕೇಪ್ಟೌನ್ನಲ್ಲಿ 2 ಟೆಸ್ಟ್ ಪಂದ್ಯವಾಡಿರುವ ಟೀಮ್ ಇಂಡಿಯಾದ ಮಾಜಿ ಎಡಗೈ ವೇಗಿ ಜಹೀರ್ ಖಾನ್ ಒಟ್ಟು 9 ವಿಕೆಟ್ ಪಡೆದಿದ್ದಾರೆ.
4- ಹರ್ಭಜನ್ ಸಿಂಗ್: ಕೇಪ್ ಟೌನ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯವಾಡಿರುವ ಭಜ್ಜಿ ಒಟ್ಟು 7 ವಿಕೆಟ್ ಕಬಳಿಸಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
5- ಶ್ರೀಶಾಂತ್: ಶ್ರೀ ಕೇಪ್ ಟೌನ್‌ನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ವೇಳೆ 7 ವಿಕೆಟ್ ಉರುಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ 5ನೇ ಬೌಲರ್ ಎನಿಸಿಕೊಂಡಿದ್ದಾರೆ.
6- ಭುವನೇಶ್ವರ್ ಕುಮಾರ್: ಟೀಮ್ ಇಂಡಿಯಾದ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಭುವನೇಶ್ವರ್ ಕುಮಾರ್ ಈ ಹಿಂದೆ ಕೇಪ್ ಟೌನ್ ಮೈದಾನದಲ್ಲಿ ಒಂದು ಪಂದ್ಯವಾಡಿದ್ದರು. ಈ ವೇಳೆ 6 ವಿಕೆಟ್ ಕಬಳಿಸಿ ಮಿಂಚಿದ್ದರು.
7- ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 2018 ರಲ್ಲಿ ಕೇಪ್ ಟೌನ್ ಮೈದಾನದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈ ವೇಳೆ 4 ವಿಕೆಟ್ ಉರುಳಿಸಿ ಮಿಂಚಿದ್ದರು.
8- ಮೊಹಮ್ಮದ್ ಶಮಿ: ಕೇಪ್ ಟೌನ್ ಮೈದಾನದಲ್ಲಿ ಮೊಹಮ್ಮದ್ ಶಮಿ ಕೂಡ ಒಂದು ಪಂದ್ಯವಾಡಿದ್ದಾರೆ. ಈ ವೇಳೆ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಹೀಗಾಗಿ ಇಬ್ಬರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ನಲ್ಲಿ 9 ವಿಕೆಟ್ ಕಬಳಿಸಿದರೆ, ಜಾವಗಲ್ ಶ್ರೀನಾಥ್ ಹೆಸರಿನಲ್ಲಿರುವ 12 ವಿಕೆಟ್ಗಳ ದಾಖಲೆಯನ್ನು ಮುರಿಯಬಹುದು.