- Kannada News Photo gallery Cricket photos IND vs WI kuldeep yadav 4 wicket in 18 balls creates history in india vs west indies 1st odi
IND vs WI: 3 ಓವರ್, 4 ವಿಕೆಟ್; ವಿಂಡೀಸ್ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಕುಲ್ದೀಪ್ ಯಾದವ್
Kuldeep Yadav: ಇನ್ನು ಈ ಪಂದ್ಯದಲ್ಲಿ ಮಿಂಚಿದ ಟೀಂ ಇಂಡಿಯಾದ ಇಬ್ಬರು ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಕ್ರಮವಾಗಿ 3 ಹಾಗೂ 4 ವಿಕೆಟ್ ಉರುಳಿಸುವುದರೊಂದಿಗೆ ಹಲವು ದಾಖಲೆಗಳನ್ನು ಮುರಿದರು.
Updated on: Jul 28, 2023 | 8:59 AM

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ ಪಡೆ 115 ರನ್ಗಳಿಗೆ ತನ್ನ ಆಟ ಮುಗಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಸುಲಭ ಜಯ ಸಾಧಿಸಿತು.

ಇನ್ನು ಈ ಪಂದ್ಯದಲ್ಲಿ ಮಿಂಚಿದ ಟೀಂ ಇಂಡಿಯಾದ ಇಬ್ಬರು ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಕ್ರಮವಾಗಿ 3 ಹಾಗೂ 4 ವಿಕೆಟ್ ಉರುಳಿಸುವುದರೊಂದಿಗೆ ಹಲವು ದಾಖಲೆಗಳನ್ನು ಮುರಿದರು.

ಅಕ್ಷರ್ ಪಟೇಲ್ ಮತ್ತು ಯುಜ್ವೇಂದ್ರ ಚಾಹಲ್ ಬದಲು ತಂಡದಲ್ಲಿ ಆಡುವ ಅವಕಾಶ ಪಡೆದ ಎಡಗೈ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಮೊದಲ ಏಕದಿನ ಪಂದ್ಯದಲ್ಲಿ ಒಟ್ಟು ಮೂರು ಓವರ್‌ಗಳನ್ನು ಬೌಲ್ ಮಾಡಿ, ನಾಲ್ಕು ಬ್ಯಾಟರ್‌ಗಳನ್ನು ಔಟ್ ಮಾಡಿದರು.

ಬೌಲ್ ಮಾಡಿದ ಮೂರು ಓವರ್‌ಗಳಲ್ಲಿ ಎರಡು ಮೇಡನ್‌ಗಳನ್ನು ಬೌಲ್ ಮಾಡಿದರು. ತಮ್ಮ ಮೂರು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ ಆರು ರನ್‌ಗಳನ್ನು ಬಿಟ್ಟುಕೊಟ್ಟರು. ಅಲ್ಲದೆ ಪ್ರತಿ ಓವರ್ನಲ್ಲೂ ಕನಿಷ್ಠ ಒಂದು ವಿಕೆಟ್ ಪಡೆದರು. ತಮ್ಮ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಡೊಮಿನಿಕ್ ಡ್ರೇಕ್ಸ್ (3) ಅವರ ಬಲಿ ಪಡೆದ ಕುಲ್ದೀಪ್, ಮುಂದಿನ ಓವರ್‌ನ ನಾಲ್ಕನೇ ಎಸೆತದಲ್ಲಿ ಯಾನಿಕ್ ಕ್ಯಾರಿಯಾ (3) ಅವರನ್ನು ಹೊರಹಾಕಿದರು. ಡ್ರೇಕ್ಸ್‌ನಂತೆ ಕರಿಯಾ ಕೂಡ ಎಲ್‌ಬಿಡಬ್ಲ್ಯು ಔಟಾದರು.

ತಮ್ಮ ಮೂರನೇ ಓವರ್‌ನಲ್ಲಿ ಆತಿಥೇಯ ನಾಯಕ ಶಾಯ್ ಹೋಪ್ (43) ಮತ್ತು ಜೇಡನ್ ಸೀಲ್ಸ್ (0) ಅವರನ್ನು ಔಟ್ ಮಾಡುವ ಮೂಲಕ ಕುಲದೀಪ್ ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು. ಮೂರನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದ ಹೋಪ್ ಎಲ್‌ಬಿಡಬ್ಲ್ಯೂ ಆಗಿ ಔಟಾದರೆ, ಸೀಲಿಯಾಸ್ ಕೊನೆಯ ಎಸೆತದಲ್ಲಿ ಲೆಗ್ ಸ್ಲಿಪ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು.

ಮೂರು ಓವರ್‌ಗಳಲ್ಲಿ ಆರು ರನ್ ನೀಡಿ, ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತೀಯ ಬೌಲರ್ ಒಬ್ಬ ನೀಡಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ. ಈ ಹಿಂದೆ ಯುಜ್ವೇಂದ್ರ ಚಹಾಲ್ (4/17), ಅಮಿತ್ ಮಿಶ್ರಾ (4/31), ಭುವನೇಶ್ವರ್ ಕುಮಾರ್ (4/31), ಮತ್ತು ಮೊಹಮ್ಮದ್ ಶಮಿ (4/48) - ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದಲ್ಲದೆ ಕುಲ್ದೀಪ್ ಮತ್ತು ರವೀಂದ್ರ ಜಡೇಜಾ ಒಟ್ಟು 7 ವಿಕೆಟ್ ಪಡೆಯುವುದರೊಂದಿಗೆ ಏಕದಿನದಲ್ಲಿ 7 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾಗೆಯೇ ಈ ಪಂದ್ಯದಲ್ಲಿ 3 ವಿಕೆಟ್ ಪಡೆದ ಜಡೇಜಾ ಏಕದಿನ ಮಾದರಿಯಲ್ಲಿ ವಿಂಡೀಸ್ ಹಾಗೂ ಭಾರತ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್ಗಳ ಪೈಕಿ ಜಂಟಿಯಾಗಿ ಮೊದಲ ಸ್ಥಾನ (44 ವಿಕೆಟ್) ಪಡೆದುಕೊಂಡಿದ್ದಾರೆ.
























