
ಮ್ಯಾಂಚೆಸ್ಟರ್‌ನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ, ಸತತ 4ನೇ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದ್ದರ ಕಾರಣದಿಂದಾಗಿ ಈ ಮೊದಲೇ ನಿರೀಕ್ಷಿಸಿದಂತೆ 3 ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ ಸಾಯಿ ಸುದರ್ಶನ್, ಶಾರ್ದೂಲ್ ಠಾಕೂರ್ ಹಾಗೂ ಅನ್ಶುಲ್ ಕಾಂಬೋಜ್ ತಂಡದ ಪರ ಕಣಕ್ಕಿಳಿದಿದ್ದಾರೆ.

ಈ ಪಂದ್ಯದಲ್ಲಿ ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್ ಆಡುವ ಅವಕಾಶ ಪಡೆದಿದ್ದಾರೆ. ಇದರೊಂದಿಗೆ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿದ ಅಚ್ಚರಿಯ ಗಳಿಗೆಗೆ ಮ್ಯಾಂಚೆಸ್ಟರ್ ಮೈದಾನ ಸಾಕ್ಷಿಯಾಗಿದೆ.

ವಾಸ್ತವವಾಗಿ, ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಯ್ಕೆ ಮಾಡಿದ ಪ್ಲೇಯಿಂಗ್ 11 ರಲ್ಲಿ ಐವರು ಎಡಗೈ ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 5 ಎಡಗೈ ಬ್ಯಾಟ್ಸ್‌ಮನ್‌ಗಳು ಟೆಸ್ಟ್‌ನಲ್ಲಿ ಆಡುತ್ತಿರುವುದು ಇದೇ ಮೊದಲು.

ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜ, ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಎಡಗೈ ಬ್ಯಾಟ್ಸ್‌ಮನ್‌ಗಳಾಗಿ ಆಡುತ್ತಿರುವ ಐವರು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಕರುಣ್ ನಾಯರ್ ಬದಲಿಗೆ ಸುದರ್ಶನ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿರುವುದರಿಂದ ತಂಡದಲ್ಲಿ ಐವರು ಎಡಚರು ಆಡುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ, ನಾಯಕ ಶುಭ್‌ಮನ್ ಗಿಲ್ ಇದುವರೆಗೆ ಒಂದೇ ಒಂದು ಪಂದ್ಯದಲ್ಲಿ ಟಾಸ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನ ಕಳೆದ 14 ಪಂದ್ಯಗಳಲ್ಲಿ ಭಾರತ ತಂಡವು ಒಮ್ಮೆಯೂ ಟಾಸ್ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇದರೊಂದಿಗೆ 2025 ರ ಆರಂಭದಿಂದ ಇಲ್ಲಿಯವರೆಗೆ ಟೀಂ ಇಂಡಿಯಾ ಇಡೀ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ತಂಡ ಎನಿಸಿಕೊಂಡಿದೆ.