- Kannada News Photo gallery Cricket photos India Lose 14th Toss In A Row; New World Record in Cricket
ಟಾಸ್ ಸೋಲುವುದರಲ್ಲೂ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
India vs England 4th Test: ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 264 ರನ್ ಕಲೆಹಾಕಿದೆ.
Updated on: Jul 24, 2025 | 7:26 AM

ಭಾರತ ತಂಡದ ಹೆಸರಿಗೆ ಹೊಸ ವಿಶ್ವ ದಾಖಲೆಯೊಂದು ಸೇರ್ಪಡೆಯಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಾಣವಾಗಿರುವುದು ನತದೃಷ್ಟದಿಂದ ಎಂಬುದು ವಿಶೇಷ. ಅಂದರೆ ಸತತವಾಗಿ ಟಾಸ್ ಸೋತು ಟೀಮ್ ಇಂಡಿಯಾ ಅನಗತ್ಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಅದು ಕೂಡ 14 ಬಾರಿ ಟಾಸ್ ಸೋಲುವುದರೊಂದಿಗೆ..!

ಹೌದು, ಭಾರತ ತಂಡದ ನಾಯಕರುಗಳು ಕಳೆದ 14 ಪಂದ್ಯಗಳಲ್ಲಿ ಟಾಸ್ ಗೆದ್ದಿಲ್ಲ. ಜನವರಿಯಲ್ಲಿ ರಾಜ್ಕೋಟ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೊನೆಯ ಬಾರಿ ಟಾಸ್ ಗೆದ್ದಿದ್ದರು. ಇದಾದ ಬಳಿಕ ಸತತ 14 ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಟಾಸ್ ಸೋತಿದೆ.

ವಿಶೇಷ ಎಂದರೆ ಇದರ ನಡುವೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನೂ ಸಹ ಆಡಿದೆ. ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಒಮ್ಮೆಯೂ ಟಾಸ್ ಗೆದ್ದಿರಲಿಲ್ಲ. ಇದಾಗ್ಯೂ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಶುಭ್ಮನ್ ಗಿಲ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಟಾಸ್ ಸೋಲಿನ ಪರಂಪರೆಯನ್ನು ಮುಂದುವರೆಸಿದೆ.

ಇಂಗ್ಲೆಂಡ್ ವಿರುದ್ಧದ ಅ್ಯಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲೂ ಶುಭ್ಮನ್ ಗಿಲ್ ಟಾಸ್ ಸೋತಿದ್ದಾರೆ. ಇದರೊಂದಿಗೆ ಕ್ರಿಕೆಟ್ ಇತಿಹಾಸದ ಬೇಡದ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಯಿತು. ಅಂದರೆ ಸತತವಾಗಿ ಟಾಸ್ ಸೋತು, ಟಾಸ್ ಸೋಲುವುದರಲ್ಲೇ ಟೀಮ್ ಇಂಡಿಯಾ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಇದಕ್ಕೂ ಮುನ್ನ ಇಂತಹದೊಂದು ಅನಗತ್ಯ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿತ್ತು. 1999 ರಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕರುಗಳು ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಹಾಗೆಯೇ 2022-2023ರ ನಡುವೆ ಇಂಗ್ಲೆಂಡ್ ತಂಡ ಸತತ 11 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಇದೀಗ ಈ ಎರಡು ದಾಖಲೆಗಳನ್ನು ಟೀಮ್ ಇಂಡಿಯಾ ಮುರಿದಿದೆ.

ಭಾರತ ತಂಡವು ಜನವರಿ 31 ರಿಂದ ಈವರೆಗೆ ಒಂದೇ ಒಂದು ಪಂದ್ಯದಲ್ಲಿ ಟಾಸ್ ಗೆದ್ದಿಲ್ಲ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಸತತ 14 ಮ್ಯಾಚ್ಗಳಲ್ಲಿ ಟಾಸ್ ಸೋತ ತಂಡವೆಂಬ ಅನಗತ್ಯ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದೀಗ ಹದಿನಾಲ್ಕು ಟಾಸ್ ಸೋಲಿನೊಂದಿಗೆ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾದ ಈ ನತದೃಷ್ಟಕ್ಕೆ ಬ್ರೇಕ್ ಹಾಕುವ ನಾಯಕ ಯಾರೆಂಬುದೇ ಸದ್ಯದ ಕುತೂಹಲ.
