- Kannada News Photo gallery Cricket photos India opened with Shikhar Dhawan and Shubman Gill not KL Rahul in IND vs ZIM 1st ODI
IND vs ZIM: ಭಾರತ ಭರ್ಜರಿ ಶುಭಾರಂಭ: ಎಲ್ಲರ ಮೆಚ್ಚಿಗೆಗೆ ಕಾರಣವಾದ ಕೆಎಲ್ ರಾಹುಲ್ ನಡೆ
ZIM vs IND: ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಬೊಂಬಾಟ್ ಪ್ರದರ್ಶನ ತೋರಿದ್ದು 10 ವಿಕೆಟ್ ಗಳ ಅಮೋಘ ಗೆಲುವು ಕಂಡಿದೆ.
Updated on:Aug 19, 2022 | 7:35 AM

ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಬೊಂಬಾಟ್ ಪ್ರದರ್ಶನ ತೋರಿದ್ದು 10 ವಿಕೆಟ್ ಗಳ ಅಮೋಘ ಗೆಲುವು ಕಂಡಿದೆ. ಬೌಲರ್ ಗಳ ಸಂಘಟಿತ ಹೋರಾಟದ ಜೊತೆ ಶುಭ್ಮನ್ ಗಿಲ್ ಹಾಗೂ ಶಿಖರ್ ಧವನ್ ಅವರ ಅಜೇಯ ಜೊತೆಯಾಟದ ನೆರವಿನಿಂದ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಅವರ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಆರಂಭಿಕನಾಗಿ ಕಣಕ್ಕಿಳಿಯುವ ರಾಹುಲ್ ಈ ಬಾರಿ ತಮ್ಮ ಸ್ಥಾನವನ್ನು ಗಿಲ್ ಗೆ ಬಿಟ್ಟುಕೊಟ್ಟು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮುಂದಾದರು. ನಾಯಕನ ಈ ಗುಣವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ದೀಪಕ್ ಚಹರ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಆರಂಭಿಕರಾಗಿ ಕಣಕ್ಕಿಳಿದ ಇನ್ನೋಸೆಂಟ್ ಕೈಯಾ 4 ರನ್ ಕಲೆ ಹಾಕಿದರೆ, ತಡಿವಾನಿಶೆ ಮರುಮನಿ 8, ವೆಸ್ಲಿ ಮಧೆವೆರೆ 5 ರನ್, ಸೀನ್ ವಿಲಿಯಮ್ಸ್ ಕೇವಲ 1 ರನ್, ಸಿಕಂದರ್ ರಾಜಾ 12 ರನ್ , ನಾಯಕ ರೆಗಿಸ್ ಚಕಬ್ವ 35 ರನ್, ರಾನ್ ಬರ್ಲ್ 11 ರನ್, ಲೂಕ್ ಜೋಂಗ್ವೆ 13 ರನ್, ವಿಕ್ಟರ್ ನ್ಯುಚಿ 8 ರನ್ ಗೆ ಔಟಾದರು.

ರಿಚರ್ಡ್ 34 ರನ್ ಮತ್ತು ಬ್ರಾಡ್ ಇವಾನ್ಸ್ ಅಜೇಯ 33 ಕಲೆಹಾಕಿದರು. 9ನೇ ವಿಕೆಟ್ ಗೆ ಜತೆಯಾದ ರಿಚರ್ಡ್ ನ್ಗರವ ಮತ್ತು ಬ್ರಾಡ್ ಇವಾನ್ಸ್ 70 ರನ್‌ಗಳ ಜತೆಯಾಟವಾಡುವುದರ ಮೂಲಕ ತಂಡದ ಮೊತ್ತ ಹೆಚ್ಚಾಗುವಂತೆ ಮಾಡಿದರು.

ಜಿಂಬಾಬ್ವೆ 40.3 ಓವರ್‌ಗಳಲ್ಲಿ 189 ರನ್ ಕಲೆಹಾಕಿ ಆಲ್ ಔಟ್ ಆಯಿತು. ಟೀಮ್ ಇಂಡಿಯಾ ಪರ ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ ಹಾಗೂ ಅಕ್ಷರ್ ಪಟೇಲ್ ತಲಾ 3 ವಿಕೆಟ್‌ಗಳನ್ನು ಪಡೆದರೆ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.

ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಭಾರತಕ್ಕೆ ಈ ಗುರಿ ಸವಾಲಾಗಿ ಪರಿಣಮಿಸಲೇ ಇಲ್ಲ. ಧವನ್ ಮತ್ತು ಗಿಲ್ ವಿಕೆಟ್ ನಷ್ಟವಿಲ್ಲದೆ ಕೇವಲ 30.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಧವನ್ ಎಚ್ಚರಿಕೆಯ ಆಟವಾಡಿದರೆ, ಗಿಲ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.

ಧವನ್ 113 ಎಸೆತಗಳನ್ನು ಎದುರಿಸಿ 9 ಬೌಂಡರಿ ಹೊಡೆದರು. 72 ಎಸೆತಗಳನ್ನು ಎದುರಿಸಿದ ಗಿಲ್ 10 ಬೌಂಡರಿ ಮತ್ತು ವೆಸ್ಲಿ ಮೆಡೆವೆರೆ ಎಸೆತದಲ್ಲಿ ಒಂದು ಸಿಕ್ಸರ್ ಸಿಡಿಸಿದರು.

ಈ ಮೂಲಕ ಕೆಎಲ್ ರಾಹುಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಪಂದ್ಯ ಜಯ ಸಾಧಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯೊಂದನ್ನು ಬರೆದಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಜಿಂಬಾಬ್ವೆ ವಿರುದ್ಧ ಸತತ 13 ಏಕದಿನ ಪಂದ್ಯಗಳಲ್ಲಿ ಭಾರತ ಗೆದ್ದಂತಾಗಿದೆ.
Published On - 7:35 am, Fri, 19 August 22
