
ಕ್ರಿಕೆಟ್ ಅಂಗಳದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲು ಇನ್ನೊಂದು ತಿಂಗಳು ಬಾಕಿ ಇದೆ. ಆದರೆ ಅದಕ್ಕೂ ಮುನ್ನವೇ ಪಾಕಿಸ್ತಾನ ಆಟಗಾರರು ತಮ್ಮ ಬಾಲ ಬಿಚ್ಚಲು ಶುರು ಮಾಡಿದ್ದಾರೆ. ಮೈದಾನದಲ್ಲಿ ಟೀಂ ಇಂಡಿಯಾ ವಿರುದ್ಧ ಮಂಡಿಯೂರುವ ಈ ಪಾಕಿಗಳು ಮೈದಾನದ ಹೊರಗೆ ಮಾತ್ರ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ.

2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಪಾಕಿಸ್ತಾನ ತಂಡ ಈ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲವಾದ್ದರಿಂದ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಪರಿಣಾಮವಾಗಿ, ಭಾರತ-ಪಾಕಿಸ್ತಾನ ಪಂದ್ಯವೂ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪಂದ್ಯ ಫೆಬ್ರವರಿ 15 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

2025 ರ ಏಷ್ಯಾಕಪ್ ಫೈನಲ್ ನಂತರ ಇದು ಮೊದಲ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದೆ. ಆದರೆ ಏಷ್ಯಾಕಪ್ ಸಮಯದಲ್ಲಿ ಹುಟ್ಟಿಕೊಂಡಿದ್ದ ವಿವಾದಗಳು ಮಾಸುವ ಮುನ್ನವೇ ಉಭಯ ತಂಡಗಳು ಮತ್ತೊಂದು ಕದನಕ್ಕೆ ಸಜ್ಜಾಗಿವೆ. ಆದರೆ ಅದಕ್ಕೂ ಮೊದಲು ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ಟಿ20 ವಿಶ್ವಕಪ್ನಲ್ಲಿ ಎದ್ದಿರುವ ವಿವಾದದ ಬಗ್ಗೆ ಮಾತನಾಡಿದ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ, ‘ಗಡಿಯಾಚೆಗಿನವರು (ಭಾರತ) ಆಟದ ಉತ್ಸಾಹವನ್ನು ಉಲ್ಲಂಘಿಸಿದ್ದಾರೆ. ಆದರೆ ನಮ್ಮ ಕೆಲಸ ಕ್ರಿಕೆಟ್ ಆಡುವುದು, ಮತ್ತು ನಮ್ಮ ಗಮನ ಅದರ ಮೇಲೆ. ನಾವು ಅವರಿಗೆ ಮೈದಾನದಲ್ಲಿ ಸೂಕ್ತ ಉತ್ತರ ನೀಡಲು ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.

ಶಾಹೀನ್ ಅಫ್ರಿದಿ ಟಿ20 ವಿಶ್ವಕಪ್ ಆಡುವುದೇ ಅನುಮಾನವಾಗಿರುವಾಗ ಅವರು ಈ ರೀತಿಯ ಹೇಳಿಕೆ ನೀಡಿರುವುದು ಭಾರತೀಯರನ್ನು ಕೆರಳಿಸಿದೆ. ವಾಸ್ತವವಾಗಿ ಅಫ್ರಿದಿ ಬಿಗ್ ಬ್ಯಾಷ್ ಲೀಗ್ ಆಡುವ ವೇಳೆ ಗಾಯಗೊಂಡಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ವಿಶ್ವಕಪ್ನಲ್ಲಿ ಆಡುವುದು ಪ್ರಸ್ತುತ ಖಚಿತವಾಗಿಲ್ಲ. ಹಾಗಿದ್ದರೂ ಅವರ ಹೇಳಿಕೆ ನಗೆಪಾಟಲಿಗೀಡಾಗಿದೆ.

ಅಫ್ರಿದಿ ಹೇಳಿಕೆಯಿಂದ ಕೆರಳಿರುವ ಭಾರತೀಯರು, ‘ಖಾಲಿ ಪಾತ್ರೆಗಳು ಯಾವಾಗಲು ಹೆಚ್ಚು ಸದ್ದು ಮಾಡುತ್ತವೆ, ಮೊದಲು ನಿಮ್ಮನ್ನು ನೀವು ಫಿಟ್ ಆಗಿ ಇಟ್ಟುಕೊಳ್ಳಿ, ನಾವು ಕೂಡ ನಿಮ್ಮನ್ನು ಮೈದಾನದಲ್ಲಿ ನೋಡಿಕೊಳ್ಳುತ್ತೇವೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಅಫ್ರಿದಿಗೆ ತಿರುಗೇಟು ನೀಡಿದ್ದಾರೆ.