
2024 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ಬಳಿಕ ಚುಟುಕು ಮಾದರಿಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ, ಇದೀಗ ಐಪಿಎಲ್ ನಡುವೆ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ರೋಹಿತ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ವಾಸ್ತವವಾಗಿ ರೋಹಿತ್ ಬಹಳ ಸಮಯದಿಂದ ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ರನ್‌ಗಳಿಸಲು ಕಷ್ಟಪಡುತ್ತಿದ್ದರು. ಇದರ ಜೊತೆಗೆ, ರೋಹಿತ್ ನಾಯಕತ್ವದಲ್ಲಿ, ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ವೈಟ್ ವಾಶ್ ಅನುಭವಿಸಿತ್ತು. ಆ ನಂತರ ಆಸ್ಟ್ರೇಲಿಯಾದ ನೆಲದಲ್ಲಿ ಮುಜುಗರವನ್ನು ಎದುರಿಸಬೇಕಾಯಿತು.

ಹಿಟ್‌ಮ್ಯಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದು ಅದರಲ್ಲಿ, ‘ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ದೇಶವನ್ನು ಬಿಳಿ ಬಟ್ಟೆ ಧರಿಸಿ ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಇಷ್ಟು ವರ್ಷಗಳ ಕಾಲ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ರೋಹಿತ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಾಸ್ತವವಾಗಿ ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದೀಗ ಈ ಸರಣಿಗೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿರುವುದರಿಂದ ಭಾರತ ಟೆಸ್ಟ್ ತಂಡಕ್ಕೆ ಯಾರು ನಾಯಕರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಆದಾಗ್ಯೂ ನಾಯಕತ್ವದ ರೇಸ್‌ನಲ್ಲಿ ಮೂವರ ಹೆಸರುಗಳು ಮುಂಚೂಣಿಯಲ್ಲಿವೆ.

ರೋಹಿತ್ ಶರ್ಮಾ ನಿವೃತ್ತಿಯ ನಂತರ, ಟೀಂ ಇಂಡಿಯಾವನ್ನು ಟೆಸ್ಟ್‌ನಲ್ಲಿ ಮುನ್ನಡೆಸುವ ರೇಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹೆಸರು ಮುಂಚೂಣಿಯಲ್ಲಿದೆ. ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಟೀಂ ಇಂಡಿಯಾ ಗೆಲ್ಲುವಲ್ಲಿ ಯಶಸ್ವಿಯಾದ ಏಕೈಕ ಪಂದ್ಯ ಇದಾಗಿತ್ತು. ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಅನುಭವ ಹೊಂದಿದ್ದು, ನಾಯಕನಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಟೀಂ ಇಂಡಿಯಾದ ಮುಂದಿನ ಟೆಸ್ಟ್ ನಾಯಕನಾಗುವ ರೇಸ್‌ನಲ್ಲಿ ಶುಭ್ಮನ್ ಗಿಲ್ ಹೆಸರೂ ಸೇರಿದೆ. ಶುಭ್ಮನ್ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಯ್ಕೆದಾರರು ನಾಯಕನನ್ನು ಆಯ್ಕೆ ಮಾಡುವಾಗ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡರೆ, ಗಿಲ್ ಅವರ ಮೊದಲ ಆಯ್ಕೆಯಾಗಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭ್ಮನ್ ಅವರ ಪ್ರದರ್ಶನ ಉತ್ತಮವಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗುವ ರೇಸ್‌ನಲ್ಲಿ ರಿಷಭ್ ಪಂತ್ ಹೆಸರೂ ಸೇರಿದೆ. ಪಂತ್ ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಪಂದ್ಯಗಳಲ್ಲಿ ಭಾರತ ತಂಡಕ್ಕೆ ಸ್ಮರಣೀಯ ಗೆಲುವುಗಳನ್ನು ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಯ್ಕೆದಾರರು ಪಂತ್ ಹೆಸರನ್ನು ಸಹ ಪರಿಗಣಿಸಬಹುದು. ಪಂತ್‌ಗೆ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿದ ಅನುಭವ ಬಹಳಷ್ಟಿದೆ.