ಏಷ್ಯಾಕಪ್ 2022 ರಲ್ಲಿ ಭಾರತ ತಂಡ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಬುಧವಾರ ಹಾಂಗ್ ಕಾಂಗ್ ವಿರುದ್ಧ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 40 ರನ್ಗಳ ಅಮೋಘ ಗೆಲುವು ಕಂಡಿತು.
ಬೌಲರ್ ಗಳ ಸಂಘಟಿತ ಪ್ರದರ್ಶನ ಹಾಗೂ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಗೆದ್ದು ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದೆ. ಸೂರ್ಯ ಕೇವಲ 26 ಎಸೆತಗಳಲ್ಲಿ 6 ಫೋರ್, 6 ಸಿಕ್ಸರ್ ಸಿಡಿಸಿ ಅಜೇಯ 68 ರನ್ ಚಚ್ಚಿದರು.
ಕೆಎಲ್ ರಾಹುಲ್ ನಿರ್ಗಮನದ ಬಳಿಕ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇದರ ಫಲವಾಗಿ ಕೇವಲ 22 ಎಸೆತಗಳಲ್ಲೇ ಅರ್ಧಶತಕದ ಗಡಿ ಮುಟ್ಟಿದರು. ಡೀಪ್ ಎಕ್ಸ್ ಟ್ರಾ ಕವರ್ ನಲ್ಲಿ ಸಿಕ್ಸ್ ಸಿಡಿಸುವ ಮೂಲಕ ಸೂರ್ಯ ಅರ್ಧಶತಕ ಪೂರೈಸಿದರು.
ಸೂರ್ಯಕುಮಾರ್ ನೂತನ ದಾಖಲೆ ಕೂಡ ಮಾಡಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತ ಒಂಬತ್ತನೆ ಬ್ಯಾಟರ್ ಇವರಾಗಿದ್ದಾರೆ. ಅಲ್ಲದೆ 22 ಎಸೆತಗಳಲ್ಲೇ ಅರ್ಧಶತಕ ಬಾರಿಸಿರುವ ರೋಹಿತ್ ಶರ್ಮಾ ದಾಖಲೆಯನ್ನೂ ಸರಿಗಟ್ಟಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆಗೆ ವಿಕೆಟ್ ಕೂಡ ಕಳೆದುಕೊಂಡಿತು. ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದರು.
ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 1 ಫೋರ್ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 59 ರನ್ ಸಿಡಿಸಿದರು. ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192ರನ್ ಕಲೆಹಾಕಿತು.
ಟಾರ್ಗೆಟ್ ಬೆನ್ನತ್ತಿದ್ದ ಹಾಂಗ್ ಕಾಂಗ್ ತಂಡ 20 ಓವರ್‌ಗಳಲ್ಲಿ 152/5 ರನ್ ಗಳಿಸಿತಷ್ಟೆ. ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ತಲಾ 1 ವಿಕೆಟ್ ಪಡೆದರು.
Published On - 11:25 am, Thu, 1 September 22