
ಭಾರತ ತಂಡವು ಇದೇ ತಿಂಗಳಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಸರಣಿ ಆಡಲಿದೆ. ಡಿಸೆಂಬರ್ 26 ರಿಂದ ಶುರುವಾಗಲಿರುವ ಈ ಸರಣಿಯು ಟೀಮ್ ಇಂಡಿಯಾದ ಮೂವರು ಆಟಗಾರರ ಪಾಲಿಗೆ ನಿರ್ಣಾಯಕ. ಕೊನೆಯ ಅವಕಾಶ ನೀಡುವ ಸಲುವಾಗಿ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ವೈಫಲ್ಯರಾದರೂ ದಕ್ಷಿಣ ಆಫ್ರಿಕಾ ಸರಣಿಗೆ ಈ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಹಾಗಿದ್ರೆ ಯಾವ ಆಟಗಾರರಿಗೆ ಕೊನೆಯ ಚಾನ್ಸ್ ನೀಡಲಾಗಿದೆ ಎಂದು ನೋಡೋಣ...

ಅಜಿಂಕ್ಯ ರಹಾನೆ: ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕನ ಸ್ಥಾನದಿಂದ ಅಜಿಂಕ್ಯ ರಹಾನೆ ಅವರನ್ನು ಕೆಳಗಿಳಿಸಲಾಗಿದೆ. ಈ ಮೂಲಕ ಮುಂದಿನ ಪಂದ್ಯಗಳಲ್ಲಿ ವಿಫಲರಾದರೆ, ತಂಡದಿಂದ ಕೈಬಿಡುವ ಮುನ್ಸೂಚನೆ ನೀಡಿದೆ ಬಿಸಿಸಿಐ. ಏಕೆಂದರೆ ಈ ವರ್ಷ ರಹಾನೆ ಅವರ ಟೆಸ್ಟ್ ಇನಿಂಗ್ಸ್ ಸರಾಸರಿ 20ಕ್ಕಿಂತ ಕಡಿಮೆ ಇದೆ. ಇದಾಗ್ಯೂ ಅವರನ್ನು ಉಪನಾಯಕನ ಕಾರಣದಿಂದ ತಂಡದಲ್ಲಿ ಇರಿಸಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕೇವಲ ಆಟಗಾರನಾಗಿ ಮಾತ್ರ ಆಯ್ಕೆ ಮಾಡಲಾಗಿದೆ. ಅಂದರೆ ಈ ಸರಣಿಯಲ್ಲಿ ರಹಾನೆ ವಿಫಲರಾದರೆ ತಂಡದಿಂದ ಗೇಟ್ ಪಾಸ್ ಸಿಗಲಿದೆ.

ಚೇತೇಶ್ವರ ಪೂಜಾರ: ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಂಡಿದ್ದ ಪೂಜಾರ ಕೂಡ ಬಹಳ ಸಮಯದಿಂದ ಉತ್ತಮ ಪ್ರದರ್ಶನ ನೀಡಿಲ್ಲ. ಇದೀಗ ತಂಡದಲ್ಲಿ ಶ್ರೇಯಸ್ ಅಯ್ಯರ್ ಎಂಟ್ರಿಯೊಂದಿಗೆ ಪೂಜಾರ ಸ್ಥಾನ ಕೂಡ ಅಲುಗಾಡಲಾರಂಭಿಸಿದೆ. ಅಷ್ಟೇ ಅಲ್ಲದೆ ಹನುಮ ವಿಹಾರಿ ಕೂಡ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಕೂಡ ಟೆಸ್ಟ್ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ದದ 3 ಪಂದ್ಯಗಳ ಟೆಸ್ಟ್ ಸರಣಿ ಪೂಜಾರಾ ಪಾಲಿಗೂ ನಿರ್ಣಾಯಕ.

ಇಶಾಂತ್ ಶರ್ಮಾ: ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ನಲ್ಲಿ ವಿಫಲರಾಗಿದ್ದ ಇಶಾಂತ್ ಶರ್ಮಾ ಅವರನ್ನು ಗಾಯದ ಕಾರಣ 2ನೇ ಪಂದ್ಯದಿಂದ ಕೈಬಿಡಲಾಗಿತ್ತು. ಇತ್ತ ಸಿಕ್ಕ ಅವಕಾಶದಲ್ಲಿ ಮೊಹಮ್ಮದ್ ಸಿರಾಜ್ ಮಿಂಚಿನ ಬೌಲಿಂಗ್ ನಡೆಸಿದ್ದಾರೆ. ಇದೀಗ ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಕೂಡ ತಂಡಕ್ಕೆ ಮರಳಿದ್ದಾರೆ. ಇನ್ನು ಉಮೇಶ್ ಯಾದವ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ ಕೂಡ ತಂಡದಲ್ಲಿದ್ದು, ಹೀಗಾಗಿ ಇಶಾಂತ್ ಶರ್ಮಾ ಭವಿಷ್ಯ ಕೂಡ ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ನಿರ್ಧಾರವಾಗಲಿದೆ.

ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಟೆಸ್ಟ್ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, , ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್.